ನಾಳೆ ಕಿವೀಸ್ ವಿರುದ್ಧ ಎರಡನೆ ಏಕದಿನ ಪಂದ್ಯ: ಒತ್ತಡದಲ್ಲಿ ಟೀಮ್‌ಇಂಡಿಯಾ

Update: 2017-10-24 18:10 GMT

ಹೊಸದಿಲ್ಲಿ, ಅ.24: ಪ್ರವಾಸಿ ನ್ಯೂಝಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಸೋತಿರುವ ಟೀಮ್ ಇಂಡಿಯಾ ಒತ್ತಡಕ್ಕೆ ಸಿಲುಕಿದ್ದು, ಬುಧವಾರ ಪುಣೆಯಲ್ಲಿ ಎರಡನೆ ಏಕದಿನ ಪಂದ್ಯವನ್ನು ಆಡಲಿದೆ. ಭಾರತ ಸರಣಿ ಗೆಲುವಿಗೆ ಸರಣಿಯಲ್ಲಿ ಉಳಿದಿರುವ ಎರಡು ಪಂದ್ಯಗಳಲ್ಲಿ ಜಯ ಗಳಿಸಬೇಕಾಗಿದೆ.

ಭಾರತ ಇನ್ನೊಂದು ಪಂದ್ಯದಲ್ಲಿ ಸೋತರೆ ಸರಣಿ ಕೈತಪ್ಪಲಿದೆ. ನ್ಯೂಝಿಲೆಂಡ್ ಮೊದಲ ಪಂದ್ಯದಲ್ಲಿ ಜಯ ಗಳಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

 ಭಾರತ ಈ ತನಕ ಆರು ಸರಣಿಗಳಲ್ಲಿ ಜಯ ಗಳಿಸಿದೆ. ಇದರಿಂದಾಗಿ ಭಾರತ ಅತಿಯಾದ ವಿಶ್ವಾಸದಿಂದಾಗಿ ಮೊದಲ ಪಂದ್ಯದಲ್ಲಿ ಕೈ ಸುಟ್ಟುಕೊಂಡಿದೆ. ಚಾಂಪಿಯನ್ಸ್ ಟ್ರೋಫಿ ಬಳಿಕ ನ್ಯೂಝಿಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದೆ.

ನ್ಯೂಝಿಲೆಂಡ್ ವಿರುದ್ಧ ಭಾರತದ ಸೋಲನ್ನು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ರಾಸ್ ಟೇಲರ್ ಮತ್ತು ಟಾಮ್ ಲಥಾಮ್ 200 ರನ್‌ಗಳ ಜೊತೆಯಾಟ ನೀಡಿ ನ್ಯೂಝಿಲೆಂಡ್‌ಗೆ ಗೆಲುವು ತಂದು ಕೊಟ್ಟರು.

ಹೊಸ ಸ್ಪಿನ್ ಜೋಡಿ ಯಜುವೇಂದ್ರ ಚಹಾಲ್ ಮತ್ತು ಕುಲ್‌ದೀಪ್ ಯಾದವ್ ದಾಳಿಯನ್ನು ನ್ಯೂಝಿಲೆಂಡ್‌ನ ಆಟಗಾರರು ಸಮರ್ಥವಾಗಿ ಎದುರಿಸಿದ್ದಾರೆ.ಆಸ್ಟ್ರೇಲಿಯ ವಿರುದ್ಧ ಯಶಸ್ಸಿನ ಹಿನ್ನೆಲೆಯಲ್ಲಿ ಇವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿತ್ತು.

   ವಿರಾಟ್ ಕೊಹ್ಲಿ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿ 121 ರನ್‌ಗಳ ಕೊಡುಗೆ ನೀಡಿದ್ದರು. ಅವರ 31ನೆ ಶತಕದ ನೆರವಿನಲ್ಲಿ ಟೀಮ್ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 280 ರನ್ ಗಳಿಸಿತ್ತು. ತಂಡದ ಸಹ ಆಟಗಾರರ ವೈಫಲ್ಯದಿಂದಾಗಿ ತಂಡದ ಸ್ಕೋರ್ 300ರ ಗಡಿ ದಾಟಲಿಲ್ಲ. ಕೊಹ್ಲಿ 200ನೇ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸಿದ್ದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಎಡವಿದ್ದರು.

 ಕಳೆದ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಇದೇ ಕ್ರೀಡಾಂಗಣದಲ್ಲಿ ಕೊಹ್ಲಿ ಶತಕ ದಾಖಲಿಸಿದ್ದರು. ಇವರ ಶತಕದ ಸಹಾಯದಿಂದ ಭಾರತ ಗೆಲುವಿನ ನಗೆ ಬೀರಿತ್ತು.

ನ್ಯೂಝಿಲೆಂಡ್ ವಿರುದ್ಧ ಭಾರತದ ಆರಂಭಿಕ ಜೋಡಿ ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಮಿಂಚಲಿಲ್ಲ.ಟ್ರೆಂಟ್ ಬೌಲ್ಟ್(35ಕ್ಕೆ 4) ಮತ್ತು ಟಿಮ್ ಸೌಥಿ(73ಕ್ಕೆ 3) ದಾಳಿಗೆ ಸಿಲುಕಿ ಭಾರತ ಸೋಲು ಅನುಭವಿಸಿತ್ತು.

5ನೆ ಕ್ರಮಾಂಕದಲ್ಲಿ ಆಡಿದ್ದ ದಿನೇಶ್ ಕಾರ್ತಿಕ್ ಅವರು ಕೊಹ್ಲಿ ಜೊತೆ 73 ರನ್‌ಗಳ ಜೊತೆಯಾಟ ನೀಡಿದ್ದರು. ಅವರಿಗೆ ಎರಡನೆ ಏಕದಿನ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.

ಮಹೇಂದ್ರ ಸಿಂಗ್ ಧೋನಿ ಕಳೆದ ಪಂದ್ಯದಲ್ಲಿ 42 ಎಸೆತಗಳಲ್ಲಿ 25 ರನ್ ಸೇರಿಸಿದ್ದ್ದರು.

 ಬೌಲಿಂಗ್ ವಿಭಾಗದ ವೈಫಲ್ಯ ಭಾರತದ ಸೋಲಿಗೆ ಕಾರಣವಾಗಿತ್ತು. ಸ್ಪಿನ್ನರ್‌ಗಳಾದ ಚಹಾಲ್ ಮತ್ತು ಯಾದವ್ 125 ರನ್‌ಗಳನ್ನು ಎದುರಾಳಿ ತಂಡಕ್ಕೆ ಬಿಟ್ಟುಕೊಟ್ಟಿದ್ದರು. ಟಾಮ್ ಲಥಾಮ್ ಮತ್ತು ರಾಸ್ ಟೇಲರ್ ಬ್ಯಾಟಿಂಗ್‌ಗೆ ಬೇಗನೆ ಕಡಿವಾಣ ಹಾಕಲು ಭಾರತದ ಬೌಲರ್‌ಗಳು ಯಶಸ್ವಿಯಾದರೆ ಭಾರತಕ್ಕೆ ಗೆಲುವು ಸಾಧ್ಯ. ಭಾರತ ಕಳೆದ ಪಂದ್ಯದಲ್ಲಿ ಆಡಿದ್ದ ವೇಗದ ಬೌಲರ್‌ಗಳನ್ನು ಮುಂದುವರಿಸುವ ಸಾಧ್ಯತೆ ಇದೆ.

 ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದ ನ್ಯೂಝಿಲೆಂಡ್ ಎರಡನೆ ಪಂದ್ಯದಲ್ಲಿ ಗೆಲುವಿನೊಂದಿಗೆ ಸರಣಿ ಗೆಲುವಿನ ಕಡೆಗೆ ನೋಡುತ್ತಿದೆ. ಮಾರ್ಟಿನ್ ಗಪ್ಟಿಲ್ ಮತ್ತು ಕಾಲಿನ್ ಮುನ್ರೊ ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟ್‌ಗೆ 48 ರನ್‌ಗಳ ಕೊಡುಗೆ ನೀಡಿದ್ದರು. ಟೇಲರ್ 95 ರನ್ ಮತ್ತು ಲಥಾಮ್ ಔಟಾಗದೆ 103 ರನ್‌ಗಳ ಕಾಣಿಕೆ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ಸ್ಪಿನ್ನರ್‌ಗಳಾದ ಐಶ್ ಸೋಧಿ ಮತ್ತು ಮಿಚೆಲ್ ಸ್ಯಾಂಟ್ನೆರ್, ವೇಗದ ಬೌಲರ್‌ಗಳಾದ ಆ್ಯಡಮ್ ಮಿಲ್ನೆ, ಬೌಲ್ಟ್ ಮತ್ತು ಟಿಮ್ ಸೌಥಿ ಅವರು ಭಾರತದ ಬ್ಯಾಟಿಂಗ್‌ನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಲು ನೋಡುತ್ತಿದ್ದಾರೆ.

ಭಾರತ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮ, ಶಿಖರ್ ಧವನ್, ಅಜಿಂಕ್ಯ ರಹಾನೆ, ಮನೀಶ್ ಪಾಂಡೆ, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್, ಯಜುವೇಂದ್ರ ಚಹಾಲ್, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ ಕುಮಾರ್ ಮತ್ತು ಶಾರ್ದೂಲ್ ಠಾಕೂರ್.

ನ್ಯೂಝಿಲೆಂಡ್: ಕೇನ್ ವಿಲಿಯಮ್ಸನ್(ನಾಯಕ), ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರಾಂಡ್‌ಹೊಮ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಥಾಮ್, ಹೆನ್ರಿ ನಿಕೊಲಸ್, ಆ್ಯಡಮ್ ಮಿಲ್ನೆ, ಕಾಲಿನ್ ಮುನ್ರೊ, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನೆರ್, ಟಿಮ್ ಸೌಥಿ, ರಾಸ್ ಟೇಲರ್, ಜಾರ್ಜ್ ವೋಕರ್, ಐಶ್ ಸೋಧಿ

ಪಂದ್ಯದ ಸಮಯ: ಮಧ್ಯಾಹ್ನ 1:30ಕ್ಕೆ ಆರಂಭ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News