ಹಿಂದೂಸ್ತಾನ್ ಟೈಮ್ಸ್ : ಸಂಪಾದಕರ ಜೊತೆ 'ಹೇಟ್ ಟ್ರ್ಯಾಕರ್' ಸಹ ಔಟ್
ಹೊಸದಿಲ್ಲಿ, ಅ. 25 : ಧರ್ಮ , ಜಾತಿ , ಜನಾಂಗ, ಲಿಂಗ ಇತ್ಯಾದಿಗಳ ಹೆಸರಲ್ಲಿ ನಡೆಯುವ ದ್ವೇಷ ಹಿಂಸೆಯನ್ನು ರಾಷ್ಟ್ರ ಮಟ್ಟದಲ್ಲಿ ದಾಖಲಿಸುವ ತನ್ನ ಮೈಕ್ರೋ ಸೈಟ್ ಹೇಟ್ ಟ್ರ್ಯಾಕರ್ ಅನ್ನು ಹಿಂದೂಸ್ತಾನ್ ಟೈಮ್ಸ್ ನಿಲ್ಲಿಸಿದೆ.
ಬುಧವಾರ ಈ ವೆಬ್ ಸೈಟ್ ಗೆ ಭೇಟಿ ಕೊಟ್ಟ ಓದುಗರಿಗೆ '404 ಎರರ್ ಮೆಸೇಜ್ ' ಎಂಬ ತಾಂತ್ರಿಕ ದೋಷದ ಸಂದೇಶ ಕಂಡುಬಂದಿದ್ದು ಇದರ ಪ್ರಕಾರ ಈ ಸೈಟ್ ನಲ್ಲಿರುವ ಮಾಹಿತಿಗಳು ಇನ್ನು ಮುಂದೆ ಓದುಗರಿಗೆ ಸಿಗುವುದಿಲ್ಲ. ಈ ಬಗ್ಗೆ ಸಂಸ್ಥೆ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ ದಿ ವೈರ್ ಜೊತೆ ಮಾತನಾಡಿರುವ ಸಂಸ್ಥೆಯ ಇಬ್ಬರು ಪತ್ರಕರ್ತರು ಆ ವೆಬ್ ಸೈಟ್ ಅನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಪತ್ರಿಕೆಯ ನಿಕಟಪೂರ್ವ ಸಂಪಾದಕ ಬಾಬ್ಬಿ ಘೋಷ್ ಈ ವೆಬ್ ಸೈಟ್ ಅನ್ನು ಪ್ರಾರಂಭಿಸಿದ್ದರು. ಇದರಲ್ಲಿ 2015 ರ ಸೆಪ್ಟೆಂಬರ್ ಬಳಿಕ ನಡೆದ ಧರ್ಮ , ಜಾತಿ , ಜನಾಂಗ, ಲಿಂಗ ಇತ್ಯಾದಿಗಳ ಹೆಸರಲ್ಲಿ ನಡೆಯುವ ದ್ವೇಷ ಹಿಂಸೆಯ ಮಾಹಿತಿಯನ್ನು ಜನರಿಂದ ಸಂಗ್ರಹಿಸಿ ದಾಖಲಿಸುವ ವ್ಯವಸ್ಥೆ ಮಾಡಲಾಗಿತ್ತು.
ಈ ಬಗ್ಗೆ ಬಿಜೆಪಿ ಹಾಗು ಕೇಂದ್ರ ಸರ್ಕಾರದ ಪ್ರಮುಖ ನಾಯಕರಿಗೆ ತೀವ್ರ ಆಕ್ಷೇಪ ಇತ್ತು ಎಂದು ಈ ಹಿಂದೆ ವರದಿಯಾಗಿತ್ತು. ಪ್ರಧಾನಿ ಹಾಗು ಪತ್ರಿಕೆಯ ಮಾಲಕಿ ಶೋಭನಾ ಭಾರ್ತಿಯ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕದ ಬೆಳವಣಿಗೆಯಲ್ಲಿ ಬಾಬ್ಬಿ ಘೋಷ್ ಸಂಪಾದಕ ಹುದ್ದೆಯಿಂದ ನಿರ್ಗಮಿಸುವ ಘೋಷಣೆ ಮಾಡಿದ್ದರು. ಅದರ ಬೆನ್ನಿಗೇ ಪತ್ರಿಕೆ ಹೇಟ್ ಟ್ರ್ಯಾಕರ್ ವೆಬ್ ಸೈಟ್ ಬಗ್ಗೆ ನಿರಾಸಕ್ತಿ ತಾಳುತ್ತಿರುವ ಬಗ್ಗೆಯೂ ವರದಿಗಳು ಪ್ರಕಟವಾಗಿದ್ದವು.