ಪ್ಲೇ-ಆಫ್ ಪಂದ್ಯ: ಇಂದು ಮಾಲಿಗೆ ಬ್ರೆಝಿಲ್ ಎದುರಾಳಿ

Update: 2017-10-27 18:21 GMT
 ಬ್ರೆಝಿಲ್ ತಂಡ

ಕೋಲ್ಕತಾ, ಅ.27: ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಶರಣಾಗಿ ನಾಲ್ಕನೆ ಬಾರಿ ವಿಶ್ವಕಪ್ ಜಯಿಸುವ ಅವಕಾಶವನ್ನು ಕಳೆದುಕೊಂಡಿರುವ ಬ್ರೆಝಿಲ್ ತಂಡ ಶನಿವಾರ ಮೂರನೆ ಸ್ಥಾನಕ್ಕಾಗಿ ನಡೆಯಲಿರುವ ಪ್ಲೇ-ಆಫ್ ಪಂದ್ಯದಲ್ಲಿ ಮಾಲಿ ತಂಡವನ್ನು ಎದುರಿಸಲಿದೆ.

ಕೋಲ್ಕತಾದ ಫುಟ್ಬಾಲ್ ಅಭಿಮಾನಿಗಳ ನೆಚ್ಚಿನ ತಂಡವಾಗಿರುವ ಬ್ರೆಝಿಲ್ ಬುಧವಾರ ನಡೆದಿದ್ದ ಮೊದಲ ಸೆಮಿ ಫೈನಲ್‌ನಲ್ಲಿ 1-3 ಅಂತರದಿಂದ ಸೋತಿತ್ತು. ಶುಕ್ರವಾರದ ಪಂದ್ಯವನ್ನು ಗೆಲ್ಲುವ ಮೂಲಕ ಕೋಲ್ಕತಾದ ಜನತೆಯ ಮನಗೆಲ್ಲುವ ವಿಶ್ವಾಸದಲ್ಲಿದೆ.

   ಬ್ರೆಝಿಲ್ ತಂಡದಲ್ಲಿ ಚಾಣಾಕ್ಷ ಆಟಗಾರರಿದ್ದರೂ ಹೊಂಡುರಾಸ್ ವಿರುದ್ಧದ ಪಂದ್ಯವೊಂದರಲ್ಲಿ ಮಾತ್ರ 3 ಗೋಲುಗಳನ್ನು ಬಾರಿಸಿತ್ತು. ಉಳಿದ ಪಂದ್ಯಗಳಲ್ಲಿ ಗರಿಷ್ಠ 2 ಗೋಲು ಬಾರಿಸಿತ್ತು. 2015ರಲ್ಲಿ ಚಿಲಿಯಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಎರಡನೆ ಸ್ಥಾನ ಪಡೆದಿದ್ದ ಮಾಲಿ ಈ ವರ್ಷ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿತ್ತು. ಆದರೆ, 2ನೆ ಸೆಮಿಫೈನಲ್‌ನಲ್ಲಿ ಸ್ಪೇನ್‌ಗೆ ಶರಣಾಗಿತ್ತು. ಟೂರ್ನಿಯಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ್ದ ಮಾಲಿ 6 ಪಂದ್ಯಗಳಲ್ಲಿ 16 ಗೋಲುಗಳನ್ನು ಬಾರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News