ಸೆಹ್ವಾಗ್ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮ

Update: 2017-10-29 18:26 GMT

ಕಾನ್ಪುರ, ಅ.29: ನ್ಯೂಝಿಲೆಂಡ್ ವಿರುದ್ಧದ ಮೂರನೆ ಹಾಗೂ ಅಂತಿಮ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಆರಂಭಿಕ ದಾಂಡಿಗ ರೋಹಿತ್ ಶರ್ಮ ಅವರು 15ನೆ ಶತಕ ದಾಖಲಿಸುವ ಮೂಲಕ ಟೀಮ್ ಇಂಡಿಯಾದ ಮಾಜಿ ಆರಂಭಿಕ ಸ್ಫೋಟಕ ದಾಂಡಿಗ ವೀರೇಂದ್ರ ಸೆಹ್ವಾಗ್ ಅವರ ಶತಕದ ದಾಖಲೆಯನ್ನು ಸರಿಗಟ್ಟಿದ್ದಾರೆ.

  ಮುಂಬೈನ ಬಲಗೈ ದಾಂಡಿಗ 30ರ ಹರೆಯದ ರೋಹಿತ್ ಶರ್ಮ ಅವರು ಇಲ್ಲಿನ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನ್ಯೂಝಿಲೆಂಡ್ ವಿರುದ್ಧ ಚೊಚ್ಚಲ ಶತಕ ದಾಖಲಿಸಿದರು. ಕಳೆದ ಎರಡು ಪಂದ್ಯಗಳಲ್ಲಿ 7 ಮತ್ತು 20 ರನ್‌ಗೆ ಔಟಾಗಿದ್ದ ರೋಹಿತ್ ಶರ್ಮ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಲ್ಲೇ ಭರ್ಜರಿ ಆಟಕ್ಕೆ ಒತ್ತು ನೀಡಿದ ರೋಹಿತ್ ಶರ್ಮ ಅವರು 7ನೆ ಓವರ್‌ನಲ್ಲಿ ತನ್ನದೊಂದಿಗೆ ಇನಿಂಗ್ಸ್ ಆರಂಭಿಸಿದ್ದ ಶಿಖರ್ ಧವನ್ ಔಟಾದ ಬಳಿಕ ನಾಯಕ ವಿರಾಟ್ ಕೊಹ್ಲಿ ಜೊತೆ ಸೊಗಸಾದ ಇನಿಂಗ್ಸ್ ಕಟ್ಟಿದರು. ಇವರ ಭರ್ಜರಿ ಬ್ಯಾಟಿಂಗ್ ನೆರವಿನಲ್ಲಿ ಭಾರತದ ಸ್ಕೋರ್ 300ರ ಗಡಿ ದಾಟಿತ್ತು. ರೋಹಿತ್ ಶರ್ಮ 147 ರನ್ (138ಎ, 18ಬೌ,2ಸಿ) ಗಳಿಸಿದರು. ಅವರು 2017ರಲ್ಲಿ 19 ಇನಿಂಗ್ಸ್‌ಗಳಲ್ಲಿ 67.41 ಸರಾಸರಿಯಂತೆ 1,146 ರನ್ ಗಳಿಸಿದ್ದಾರೆ.5 ಶತಕ ಸಿಡಿಸಿದ್ದಾರೆ.

ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ 15ಕ್ಕಿಂತ ಅಧಿಕ ಶತಕದ ದಾಖಲಿಸಿದ ಆಟಗಾರರ ಪೈಕಿ ರೋಹಿತ್ ಶರ್ಮ 5ನೆ ದಾಂಡಿಗ. ಸಚಿನ್ ತೆಂಡುಲ್ಕರ್(49), ವಿರಾಟ್ ಕೊಹ್ಲಿ(32), ಸೌರವ್ ಗಂಗುಲಿ(22), ವೀರೇಂದ್ರ ಸೆಹ್ವಾಗ್(15) ಮತ್ತು ರೋಹಿತ್ ಶರ್ಮ(15) ಇವರ ಬಳಕ್ಕೆ ಸೇರ್ಪಡೆಗೊಂಡಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 182ನೆ ಇನಿಂಗ್ಸ್‌ನಲ್ಲಿ 15ನೆ ಶತಕ ದಾಖಲಿಸಿದ್ದರು. ವಿರಾಟ್ ಕೊಹ್ಲಿ 106, ಸೌರವ್ ಗಂಗುಲಿ 144, ವೀರೇಂದ್ರ ಸೆಹ್ವಾಗ್ 230 ಮತ್ತು ರೋಹಿತ್ ಶರ್ಮ 165ನೆ ಇನಿಂಗ್ಸ್ ನಲ್ಲಿ 15ನೆ ಶತಕ ಬಾರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News