×
Ad

ಸಾಂಸ್ಕೃತಿಕ,ಧಾರ್ಮಿಕ ಕಾರ್ಯಕ್ರಮಗಳು ಸಂವಿಧಾನದ ಭಾಗವಾಗಿವೆ

Update: 2017-10-31 20:05 IST

ಹೊಸದಿಲ್ಲಿ,ಅ.31: ಆಧ್ಯಾತ್ಮಿಕ ಗುರು ರವಿಶಂಕರ್ ಅವರು ಕಳೆದ ವರ್ಷ ದಿಲ್ಲಿಯ ಯಮುನಾ ನದಿತೀರದಲ್ಲಿ ಏರ್ಪಡಿಸಿದ್ದ ವಿಶ್ವ ಸಾಂಸ್ಕೃತಿಕ ಉತ್ಸವಗಳಂತಹ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಸಂವಿಧಾನವು ಖಾತ್ರಿ ಪಡಿಸಿರುವ ‘ಘನತೆಯಿಂದ ಬದುಕುವ ಹಕ್ಕಿನ’ ಭಾಗವಾಗಿರುವುದರಿಂದ ಇವುಗಳನ್ನು ನಿಷೇಧಿಸಲು ಅಥವಾ ನಿಲ್ಲಿಸಲು ಸಾಧ್ಯವಿಲ್ಲ ಎಂದು ಆರ್ಟ್ ಆಫ್ ಲಿವಿಂಗ್ ಪರ ಕೆಲವು ಅರ್ಜಿದಾರರು ಮಂಗಳವಾರ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ದ ಎದುರು ವಾದಿಸಿದರು.

ಕಳೆದ ವರ್ಷ ಪ್ರಕರಣದಲ್ಲಿ ಕಕ್ಷಿದಾರರಾಗಿ ಎನ್‌ಜಿಟಿಯಿಂದ ಸೇರಿಸಲ್ಪಟ್ಟ ಈ ಅರ್ಜಿದಾರರು ಇಂತಹ ಕಾರ್ಯಕ್ರಮಗಳಿಗೆ ಜೀವ ರಕ್ಷಣೆ ಮತ್ತು ವ್ಯೆಯಕ್ತಿಕ ಸ್ವಾತಂತ್ರ ಕುರಿತ ಸಂವಿಧಾನದ 21ನೇ ವಿಧಿಯಡಿ ಖಾತರಿಯಿದೆ ಎಂದು ನಿವೇದಿಸಿಕೊಂಡರು.

ಸಂವಿಧಾನದ ಹಲವಾರು ವಿಧಿಗಳನ್ನು ಉಲ್ಲೇಖಿಸಿದ ಅರ್ಜಿದಾರರು, ನ್ಯಾಯವಾದ ನಿರ್ಬಂಧಗಳು ಮತ್ತು ಪರಿಸರ ಕಳಕಳಿಗಳಿಗೆ ಒಳಪಟ್ಟು ಕುಂಭ, ಛತ್ ಅಥವಾ ಎಒಎಲ್‌ನ ವಿಶ್ವ ಸಾಂಸ್ಕೃತಿಕ ಉತ್ಸವದಂತಹ ಕಾರ್ಯಕ್ರಮಗಳ ಆಯೋಜನೆ ಮತ್ತು ಅವುಗಳಲ್ಲಿ ಭಾಗಿಯಾಗುವುದು ತಮ್ಮ ಹಕ್ಕು ಆಗಿದೆ ಎಂದು ಪ್ರತಿಪಾದಿಸಿದರು.

ಸಂವಿಧಾನದ ನಿಯಮಗಳನ್ನು ವ್ಯಾಖ್ಯಾನಿಸುವ ಅಧಿಕಾರ ಸರ್ವೋಚ್ಚ ನ್ಯಾಯಾಲಯ ಮತ್ತು ವಿವಿಧ ಉಚ್ಚ ನ್ಯಾಯಾಲಯಗಳಿಗೆ ಮಾತ್ರ ಇದೆ. 2010ರ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಕಾಯ್ದೆಯು ಎನ್‌ಜಿಟಿಗೆ ಈ ಅಧಿಕಾರವನ್ನು ನೀಡಿಲ್ಲ. ಹೀಗಾಗಿ ಎನ್‌ಜಿಟಿಯು ಸಂವಿಧಾನವನ್ನು ವ್ಯಾಖ್ಯಾನಿಸುವಂತಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಪ್ರಜನ್ಯ ಚೌಧರಿ, ಅನಿಲ ಕಪೂರ ಮತ್ತು ಆನಂದ ಮಾಥೂರ್ ಅವರು ಸಲ್ಲಿಸಿರುವ ಅರ್ಜಿಯು ರವಿಶಂಕರ್ ಅವರ ಕಾರ್ಯಕ್ರಮದಿಂದ ಯಮುನಾ ನದಿ ಬಯಲಿಗೆ ಹಾನಿಯುಂಟಾಗಿರುವ ವಿವಾದವನ್ನು ನಿರ್ಧರಿಸುವ ಎನ್‌ಜಿಟಿಯ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸಿದೆ.

ಸಂವಿಧಾನವು ವಿಶ್ವ ಸಾಂಸ್ಕೃತಿಕ ಉತ್ಸವಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಮತ್ತು ಅವುಗಳಲ್ಲಿ ಪಾಲ್ಗೊಳ್ಳಲು ಪ್ರಜೆಗಳಿಗೆ ಅವಕಾಶ ನೀಡಿದೆ ಮತ್ತು ಯಾವುದೇ ನಿರ್ಬಂಧವು ಇಂತಹ ಹಕ್ಕುಗಳನ್ನು ನಿರಾಕರಿಸುತ್ತದೆ ಎಂದು ಅರ್ಜಿದಾರರ ಪರ ವಕೀಲ ಅನಿರುದ್ಧ ಶರ್ಮಾ ಹೇಳಿದರು.

ಅರ್ಜಿಯ ವಿಚಾರಣೆಯನ್ನು ನ.2ಕ್ಕೆ ನಿಗದಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News