'ಬಲಿ' ತೆಗೆದುಕೊಳ್ಳದೆ 'ಬಲ' ತರಲಿ ರಾಜ್ಯೋತ್ಸವ ಪ್ರಶಸ್ತಿ

Update: 2017-10-31 18:27 GMT
ಕಡಿದಾಳ್ ಶಾಮಣ್ಣ

ಇವರು ನಮ್ಮ ಕಡಿದಾಳ್ ಶಾಮಣ್ಣ. ಲಂಕೇಶ್ ಅವರ 'ಗಡ್ಡದ ಶಾಮಣ್ಣ'. ರಾಜ್ಯೋತ್ಸವದ ಪ್ರಶಸ್ತಿ ಪ್ರಕಟವಾದಾಗ ಮತ್ತು ದಸರಾ ಉದ್ಘಾಟಕರ ಹೆಸರು ಪ್ರಕಟವಾದಾಗ ಪ್ರತಿವರ್ಷ ನನಗೆ ಒಂದು ಕ್ಷಣ ನೆನಪಿಗೆ ಬಂದು ಹೋಗುವ ಹೆಸರು ಮತ್ತು ಚಿತ್ರ.

ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಸಾಕಷ್ಟು ಘನತೆಯಿಂದ ಕೂಡಿದೆ ಎಂದು ಸ್ನೇಹಿತರೊಬ್ಬರು ಬರೆದದ್ದನ್ನು ನೋಡಿದೆ. ಇರಬಹುದು ಅನ್ನಿಸಿತು. ಈ ಬಾರಿ 62 ಪ್ರಶಸ್ತಿಗಾಗಿ ಒಂದು ಸಾವಿರಕ್ಕೂ ಮಿಕ್ಕಿ ಅರ್ಜಿ ಬಂದಿದ್ದವಂತೆ ! ಆಯ್ಕೆಯಾದ ಹೆಸರುಗಳನ್ನು ನೋಡಿದರೆ ಅವರಲ್ಲಿ ಯಾವ ಕಾರಣಕ್ಕೂ ಅರ್ಜಿ ಹಾಕುವ ಮನಸ್ಥಿತಿಯವರು, ಅಲ್ಲದವರು ಹಲವರು ಇದ್ದಾರೆ. ಅರ್ಜಿಹಾಕದಿದ್ದರೂ, ನಿಜವಾದ ರೀತಿಯಲ್ಲಿ ಹೇಗೆ ಈ ಆಯ್ಕೆ ನಡೆಯಬೇಕೋ ಆ ರೀತಿಗೆ ಆದ್ಯತೆ ನೀಡಿ, 'ಸಮಯಸಾಧಕ'ರನ್ನು ನಿರ್ಲಕ್ಷಿಸಿ ಅಥವಾ ತಿರಸ್ಕರಿಸಿ 'ನೈಜಸಾಧಕ'ರನ್ನು ಗುರುತಿಸಿ ಗೌರವಿಸುತ್ತಿರುವುದಕ್ಕೆ ಸಂಬಂಧಪಟ್ಟವರಿಗೆಲ್ಲ ಧನ್ಯವಾದಗಳು ಮತ್ತು ಆಯ್ಕೆಯಾದ ಇಂತಹ ನೈಜ ಸಾಧಕರಿಗೆ ಅಭಿನಂದನೆಗಳು.

ಅಂದಹಾಗೆ ನಮ್ಮ ಶಾಮಣ್ಣನನ್ನು ಆರಂಭದಲ್ಲಿ ನೆನಸಿಕೊಂಡದ್ದು ಏಕೆ ಎಂದರೆ ಹಿಂದೊಮ್ಮೆ ಹೆಗ್ಗೋಡಿನ ಕೆ.ವಿ. ಸುಬ್ಬಣ್ಣ ನೇತೃತ್ವದ ಆಯ್ಕೆ ಸಮಿತಿ ಈ ನಮ್ಮ ಶಾಮಣ್ಣನವರನ್ನು ಇದೇ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಮಾಡಿತ್ತು. ಆಗ, ''ಏ.. ಈ ಪ್ರಶಸ್ತಿ ಗಿಸಸ್ತಿ ನಮ್ಮಂಥೋರಿಗೆಲ್ಲ ಸರಿಯಾಗಲ್ಲ'' ಎಂದು ಅವರು ಅದನ್ನು ತಲೆಕೊಡವಿ ತಿರಸ್ಕರಿಸಿದ್ದರು. ಹಾಗೆ ರಾಜ್ಯದ ಇನ್ನೊಂದು 'ಪ್ರತಿಷ್ಠಿತ' ಗೌರವ ಎಂದು ಭಾವಿಸಲಾಗುವ ಮೈಸೂರು ದಸರಾ ಉದ್ಘಾಟನೆಗೆ ರಾಜ್ಯ ಸರ್ಕಾರ 2015ರಲ್ಲಿ ಇವರನ್ನು ಆಯ್ಕೆ ಮಾಡಿತ್ತು. ಆಗ ಆ 'ಗೌರವ'ವನ್ನು ತಿರಸ್ಕರಿಸುತ್ತಾ ಅವರು ಹೇಳಿದ್ದ, ''ವಿಧಾನಸೌಧ ಕಸಗುಡಿಸಲಿಕ್ಕೆ ಬೇಕಾದ್ರೆ ಹೋಗ್ತೀನಿ, ದಸರಾ ಉದ್ಘಾಟನೆಗೆ ಮಾತ್ರ ಹೋಗಲ್ಲ'' ಎಂಬ ಮಾತು ಒಂದಿಷ್ಟು ಚರ್ಚೆಯನ್ನೂ ಹುಟ್ಟುಹಾಕಿತ್ತು.

ತಾನು ಹೋರಾಡುವ ಹೋರಾಟವನ್ನು `ಒಳಗೆಹಾಕಿಕೊಳ್ಳುವ ಪ್ರಭುತ್ವದ ಕ್ರಮ’ ಎಂದೋ ಅಥವಾ ಇಂತಹ ಉಪಾದಿಗಳು ಹೋರಾಟಗಾರನ ಕಾಲನ್ನು ಕಟ್ಟಬಹುದಾದ ಹಗ್ಗಗಳೋ, ಬಾಯಿಗೆ ತುರುಕಬಹುದಾದ ಬಟ್ಟೆಗಳೋ ಆಗಬಹುದೆಂದು ಶಾಮಣ್ಣ ಹಾಗೆ ಮಾಡಿರಬಹುದು ಎಂದು ನಾನು ಅಂದುಕೊಳ್ಳುತ್ತೇನೆ. ತನ್ನಿಷ್ಟದ ಸಂಗಾತಿಗಳೊಂದಿಗೆ ಹೋರಾಟಗಳಲ್ಲಿ ಪಾಲ್ಗೊಳ್ಳುವುದು ಅದಿಲ್ಲದ ವೇಳೆ ತನ್ನಿಷ್ಟದ ಸರೋದ್ ಮೇಲೆ ಬೆರಳಾಡಿಸುತ್ತಾ ಬಾಯಲ್ಲಿ ತನ್ನದೇ ಆದ ಶೈಲಿಯಲ್ಲಿ ಹಾಡು ಗುನುಗುತ್ತಾ ಇರುವುದು. ಬಹುಶಃ ಶಾಮಣ್ಣನವರಿಗೆ ಮೇಲಿನ ಅವರಿಂದ ತಿರಸ್ಕೃತಗೊಂಡಿರುವ ಪ್ರತಿಷ್ಠಿತ ಗೌರವಗಳಿಗಿಂತ ಹೆಚ್ಚು ಸಂತೋಷಕೊಡುವ ಸಂಗತಿಯಾಗಿರಬಹುದು.

ಅಂದಹಾಗೆ ಶಾಮಣ್ಣನವರ ಉದಾಹರಣೆ ಕೊಡುವ ಮೂಲಕ ಈಗ ಪ್ರಶಸ್ತಿಗೆ ಆಯ್ಕೆಯಾಗಿರುವ ಹೋರಾಟ ಮನಸ್ಥಿತಿಯ ಸಾಧಕರು ಶಾಮಣ್ಣನವರ ಮಾರ್ಗವನ್ನೇ ಅನುಸರಿಸಬೇಕು ಎಂದು ಪರೋಕ್ಷವಾಗಿ ಹೇಳುವುದು ನನ್ನ ಉದ್ದೇಶವಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಅವರೆಲ್ಲರೂ ಈ ಗೌರವವನ್ನು ಸ್ವೀಕರಿಸಬೇಕು; ಸ್ವೀಕರಿಸಿಯೂ ತಾವು ಈ ಪ್ರಶಸ್ತಿಗೆ 'ಬಲಿ'ಯಾಗದೇ ಅದರಿಂದ 'ಬಲ' ತಂದುಕೊಳ್ಳಬೇಕು. ನಾಡು-ನುಡಿಯ ಘನತೆ ಗೌರವದ ಪ್ರಶ್ನೆ ಬಂದಾಗ ಅವರೊಳಗಿನ ಹೋರಾಟಗಾರನ ಬಾಯನ್ನು ಈ ಗೌರವ ಕಟ್ಟದಿದ್ದರೆ ಅಷ್ಟೇ ಸಾಕು. ಆಗ ಪ್ರಶಸ್ತಿಗೂ ಅವರಿಗೂ ಗೌರವ ನಿಜಾರ್ಥದಲ್ಲಿ ಸಲ್ಲುತ್ತದೆ. ಹಾಗಾಗಲೆಂದು ಹಾರೈಸೋಣ.

Writer - ರಾಜೇಂದ್ರ ಬುರಡಿಕಟ್ಟಿ ಬಿ

contributor

Editor - ರಾಜೇಂದ್ರ ಬುರಡಿಕಟ್ಟಿ ಬಿ

contributor

Similar News