ನಾಳೆ ಭಾರತ-ಕಿವೀಸ್ ಟ್ವೆಂಟಿ-20 ಮೊದಲ ಪಂದ್ಯ

Update: 2017-10-31 18:26 GMT

ಹೊಸದಿಲ್ಲಿ, ಅ.31: ನ್ಯೂಝಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡ ಭಾರತದ ಕ್ರಿಕೆಟ್ ತಂಡ ಬುಧವಾರ ಇಲ್ಲಿ ನಡೆಯಲಿರುವ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಸವಾಲು ಎದುರಿಸಲು ತಯಾರಿ ನಡೆಸಿದೆ. ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತ ದಾಖಲೆಯನ್ನು ಉತ್ತಮಪಡಿಸಲು ನೋಡುತ್ತಿದೆ.

ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯ ಭಾರತ ಕ್ರಿಕೆಟ್ ತಂಡದ ಹಿರಿಯ ವೇಗಿ ಆಶೀಷ್ ನೆಹ್ರಾ ಅವರಿಗೆ ವೃತ್ತಿ ಜೀವನದ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ.

 38ರ ಹರೆಯದ ನೆಹ್ರಾ ತವರಿನ ಅಭಿಮಾನಿಗಳ ಮುಂದೆ ಕೊನೆಯ ಪಂದ್ಯವನ್ನಾಡುತ್ತಿದ್ದಾರೆ. ಅವರಿಗೆ ಈ ಪಂದ್ಯದಲ್ಲಿ ಗೆಲುವಿನ ಉಡುಗೊರೆ ಸಮರ್ಪಿಸಲು ಕೊಹ್ಲಿ ಪಡೆ ಶ್ರಮಿಸಲಿದೆ.

18 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಲಿರುವ ನೆಹ್ರಾ ಕೊನೆಯ ಪಂದ್ಯವನ್ನು ಉತ್ತಮ ಪ್ರದರ್ಶನದೊಂದಿಗೆ ಕೊನೆಗೊಳಿಸುವ ಪ್ರಯತ್ನ ನಡೆಸಲಿದ್ದಾರೆ.

ಭಾರತ ಈ ತನಕ ನ್ಯೂಝಿಲೆಂಡ್ ವಿರುದ್ಧ ಆಡಿರುವ ಎಲ್ಲ 5 ಟ್ವೆಂಟಿ-20 ಪಂದ್ಯಗಳನ್ನು ಕಳೆೆದುಕೊಂಡಿದೆ. ಕೊನೆಯದಾಗಿ 2016ರಲ್ಲಿ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಡಿತ್ತು.

ಐಸಿಸಿ ಟ್ವೆಂಟಿ-20 ಕ್ರಿಕೆಟ್ ರ್ಯಾಂಕಿಂಗ್‌ನಲ್ಲಿ ಪ್ರಸ್ತುತ ನ್ಯೂಝಿಲೆಂಡ್ ನಂ.1 ಸ್ಥಾನದಲ್ಲಿದ್ದು, ಭಾರತ ಐದನೆ ಸ್ಥಾನದಲ್ಲಿದೆ. ಭಾರತಕ್ಕೆ ಇದೊಂದು ಸವಾಲಿನ ಸರಣಿಯಾಗಿದೆ.

 ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ರವಿವಾರ ನ್ಯೂಝಿಲೆಂಡ್ ವಿರುದ್ಧ 6 ರನ್‌ಗಳ ರೋಚಕ ಜಯ ಗಳಿಸಿದ ಕೊಹ್ಲಿ ಪಡೆ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿ ಕೊಂಡಿ ತ್ತು. ಇದೇ ಪ್ರದರ್ಶ ನವನ್ನು ಟ್ವೆಂಟಿ -20 ಸರಣಿಯಲ್ಲೂ ಮುಂದುವರಿಸುವ ಪ್ರಯತ್ನ ನಡೆಸಲಿದೆ.

ಮೂರನೆ ಹಾಗೂ ನಿರ್ಣಾಯಕ ಪಂದ್ಯದಲ್ಲಿ ನಾಯಕ ಕೊಹ್ಲಿ ಶತಕ ದಾಖಲಿಸಿದ್ದರು. ಇದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ 9 ಸಾವಿರ ರನ್‌ಗಳ ಮೈಲುಗಲ್ಲನ್ನು ಮುಟ್ಟಿದ್ದರು.ಉಪನಾಯಕ ರೋಹಿತ್ ಶರ್ಮ ಕೂಡಾ ಶತಕ ದಾಖಲಿಸಿದ್ದರು. ಕೊಹ್ಲಿ, ರೋಹಿತ್, ಶಿಖರ್ ಧವನ್ ಮತ್ತು ಮಹೇಂದ್ರ ಸಿಂಗ್ ಧೋನಿ ಕಿವೀಸ್ ವಿರುದ್ಧ ಈ ತನಕ ಉತ್ತಮ ಪ್ರದರ್ಶನ ನೀಡಿರುವ ದಾಖಲೆ ಹೊಂದಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾವನ್ನು ಇನ್ನಷ್ಟು ಬಲಿಷ್ಠಗೊಳಿಸಿದ್ದಾರೆ. ನ್ಯೂಝಿಲೆಂಡ್‌ಗೆ ಪಾಂಡ್ಯ ಭಯ ಕಾಡುತ್ತಿದೆ.ಜಸ್‌ಪ್ರೀತ್ ಬುಮ್ರಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಕಳೆದ ಪಂದ್ಯದಲ್ಲಿ 10 ಓವರ್‌ಗಳಲ್ಲಿ 47 ರನ್‌ಗೆ 3 ವಿಕೆಟ್ ಉಡಾಯಿಸಿದ್ದರು.

ವೇಗಿ ಭುವನೇಶ್ವರ್ ಕುಮಾರ್ 10 ಓವರ್‌ಗಳಲ್ಲಿ 92 ರನ್ ಬಿಟ್ಟಕೊಟ್ಟು 1 ವಿಕೆಟ್ ಪಡೆದಿದ್ದರು. ಲೆಗ್ ಸ್ಪಿನ್ನರ್ ಎರಡು ವಿಕೆಟ್ ಉಡಾಯಿಸಿದ್ದರು. ಕುಲದೀಪ್ ಯಾದವ್ ಅಂತಿಮ ಹನ್ನೊಂದರ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ.

ಭಾರತ

ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮ, ಜಸ್‌ಪ್ರೀತ್ ಬುಮ್ರಾ, ಯಜುವೇಂದ್ರ ಚಹಾಲ್, ಶಿಖರ್ ಧವನ್, ಮಹೇಂದ್ರ ಸಿಂಗ್ ಧೋನಿ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಕುಲ್‌ದೀಪ್ ಯಾದವ್, ಭುವನೇಶ್ವರ ಕುಮಾರ್, ಮುಹಮ್ಮದ್ ಸಿರಾಜ್, ಆಶೀಷ್ ನೆಹ್ರಾ(ಮೊದಲ ಪಂದ್ಯಕ್ಕೆ ಮಾತ್ರ), ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕೆ.ಎಲ್.ರಾಹುಲ್.

ನ್ಯೂಝಿಲೆಂಡ್

ಕೇನ್ ವಿಲಿಯಮ್ಸನ್(ನಾಯಕ), ಟೊಡ್ ಅಸ್ತ್ಲೆ, ಟ್ರೆಂಟ್ ಬೌಲ್ಟ್, ಟಾಮ್ ಬ್ರುಸಿ, ಕಾಲಿನ್ ಡಿ ಗ್ರಾಂಡ್‌ಹೋಮ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಥಾಮ್, ಹೆನ್ರಿ ನಿಕೋಲ್ಸ್, ಆ್ಯಡಮ್ ಮಿಲ್ನೆ, ಕಾಲಿನ್ ಮುನ್ರೊ, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನೆರ್, ಐಶ್ ಸೋಧಿ, ಟಿಮ್ ಸೌಥಿ.

ಪಂದ್ಯದ ಸಮಯ:  ರಾತ್ರಿ 7.00 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News