ಪೌರತ್ವವನ್ನು ಸಾಬೀತುಪಡಿಸಿ: ಇನ್ನೋರ್ವ ಮಾಜಿ ಯೋಧನಿಗೆ ಸೂಚನೆ

Update: 2017-11-07 15:35 GMT

ಗುವಾಹಟಿ,ನ.7: ಹವಿಲ್ದಾರ್‌ನಾಗಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅಸ್ಸಾಮಿನ ಮಾಜಿ ಯೋಧ ಮತ್ತು ಅವರ ಪತ್ನಿಗೆ ತಮ್ಮ ಪೌರತ್ವವನ್ನು ರುಜುವಾತು ಪಡಿಸುವಂತೆ ಬಾರ್ಪೇಟಾ ಜಿಲ್ಲೆಯಲ್ಲಿನ ವಿದೇಶಿಯರ ನ್ಯಾಯಾಧಿಕರಣವು ಸೂಚಿಸಿದೆ.

2004ರಲ್ಲಿ ಭಾರತೀಯ ಸೇನೆಯಿಂದ ನಿವೃತ್ತರಾಗಿರುವ ಮಹಿರುದ್ದೀನ್ ಅಹ್ಮದ್(53) ಮತ್ತು ಅವರ ಪತ್ನಿ ಹುಸ್ನಿಯಾರಾ ಅವರಿಗೆ ಸೆ.16ರಂದು ನೋಟಿಸ್‌ಗಳನ್ನು ಜಾರಿಗೊಳಿಸಿರುವ ನ್ಯಾಯಾಧಿಕರಣವು ಅವರಿಬ್ಬರೂ ಯಾವುದೇ ಅಧಿಕೃತ ದಾಖಲೆಗಳಿ ಲ್ಲದೆ 1971,ಮಾ.25ರಂದು ಭಾರತವನ್ನು ಪ್ರವೇಶಿಸಿದ್ದರು ಎಂದು ತಿಳಿಸಿದೆ.

ಜೀವನವನ್ನೇ ರಾಷ್ಟ್ರಸೇವೆಗಾಗಿ ಅರ್ಪಿಸಿದ ಬಳಿಕ ಇಂತಹ ನೋಟಿಸ್ ಬಂದಿರುವುದು ದುರದೃಷ್ಟಕರ. ಇದು ಕಿರುಕುಳವಾಗಿದೆ. ನನ್ನ ಕುಟುಂಬದ ಯಾರಿಗೂ ಹಿಂದೆಂದೂ ಇಂತಹ ನೋಟಿಸ್ ಬಂದಿರಲಿಲ್ಲ ಎಂದು ಆಘಾತಗೊಂಡಿರುವ ಅಹ್ಮದ್ ಸುದ್ದಿಸಂಸ್ಥೆಗೆ ತಿಳಿಸಿದರು.

1986ರಲ್ಲಿ ಸೇನೆಗೆ ಸೇರಿದ್ದ ಅಹ್ಮದ್ ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2004ರಲ್ಲಿ ನಿವೃತ್ತಿಯ ಸಂದರ್ಭದಲ್ಲಿ ಪಂಜಾಬಿನ ಬಠಿಂಡಾದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಬಾರ್ಪೇಟಾ ಪೊಲಿಸ್ ಠಾಣಾ ವ್ಯಾಪ್ತಿಯ ಖಬ್ಲಾರಭಿಟಾ ಗ್ರಾಮದ ನಿವಾಸಿಯಾಗಿದ್ದಾರೆ.

ಕುತೂಹಲದ ವಿಷಯವೆಂದರೆ ಅಹ್ಮದ್‌ರ ಓರ್ವ ಸೋದರ ಜಲಾಲುದ್ದೀನ್ ಅಹ್ಮದ್ ಸೆಷನ್ಸ್ ನ್ಯಾಯಾಧೀಶರಾಗಿ ನಿವೃತ್ತರಾಗಿದ್ದಾರೆ. ಇನ್ನೋರ್ವ ಸೋದರ ಅಲ್ಲಾವುದ್ದೀನ್ ಅಹ್ಮದ್ ಬಿಎಸ್‌ಎನ್‌ಎಲ್ ಉದ್ಯೋಗಿಯಾಗಿದ್ದಾರೆ. ಹುಸ್ನಿಯಾರಾ 1972ರಲ್ಲಿ ಬಾರ್ಪೇಟಾ ಜಿಲ್ಲೆಯ ಹೌಲಿಯಲ್ಲಿ ಜನಿಸಿದ್ದು, ಅವರ ಹೆತ್ತವರ ಹೆಸರುಗಳು 1996ರ ಮತದಾರರ ಪಟ್ಟಿಯಲ್ಲಿದ್ದವು.

ಈ ಬಗ್ಗೆ ತನಿಖೆಯನ್ನು ನಡೆಸಿ ವರದಿ ಸಲ್ಲಿಸುವಂತೆ ಅಸ್ಸಾಂ ಡಿಜಿಪಿ ಮುಕೇಶ ಸಹಾಯ್ ಅವರು ಬಾರ್ಪೇಟಾ ಎಸ್‌ಪಿ ಶೈಲಾದಿತ್ಯ ಚೇಟಿಯಾ ಅವರಿಗೆ ಸೂಚಿಸಿದ್ದಾರೆ.

 ಇದು 1998ರಷ್ಟು ಹಳೆಯ ಪ್ರಕರಣ. ಇಂತಹ ಹಲವು ಪ್ರಕರಣಗಳು ಅಕ್ರಮ ವಲಸಿಗರ(ನಿರ್ಣಯ) ನ್ಯಾಯಾಧಿಕರಣಗಳಲ್ಲಿ ಬಾಕಿಯಿದ್ದವು. ಬಳಿಕ ಅವುಗಳನ್ನು ವಿದೇಶಿಯರ ನ್ಯಾಯಾಧಿಕರಣಕ್ಕೆ ವರ್ಗಾಯಿಸಲಾಗಿದೆ ಇದು ಅಂತಹ ಪ್ರಕರಣ ಗಳಲ್ಲೊಂದಾಗಿದೆ ಎಂದು ಅವರು ವಿವರಿಸಿದರು.

 ಕಳೆದ ತಿಂಗಳು ಅಸ್ಸಾಮಿನ ಕಾಮರೂಪ ಜಿಲ್ಲೆಯ ಛಯಗಾಂವ್‌ನಲ್ಲಿ ಸೇನೆಯ ಜೆಸಿಒ ಅಝ್ಮಲ್ ಹಕ್ ಅವರಿಗೂ ಇಂತಹುದೇ ಅನುಭವವಾಗಿತ್ತು. ಇದು ತಪ್ಪುಗುರುತಿನ ಪ್ರಕರಣವಾಗಿದೆ ಎಂದು ಡಿಜಿಪಿ ಸಹಾಯ್ ಬಳಿಕ ಸಮಜಾಯಿಷಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News