×
Ad

ಮುಂಬೈ: ಪ್ರಯಾಣಿಕರು ರೈಲ್ವೆ ಹಳಿಗಳನ್ನು ದಾಟದಂತೆ ಮುಳ್ಳುತಂತಿ ಬೇಲಿ ಅಳವಡಿಕೆ

Update: 2017-11-09 18:48 IST

ಮುಂಬೈ,ನ.9: ಮುಂಬೈನಾದ್ಯಂತ ರೈಲ್ವೆ ಆವರಣಗಳಲ್ಲಿಯ ಅಕ್ರಮ ಪ್ರವೇಶ ಮತ್ತು ನಿರ್ಗಮನ ಸ್ಥಳಗಳನ್ನು ಮುಚ್ಚಲು ಮತ್ತು ಪ್ರಯಾಣಿಕರು ರೈಲ್ವೆ ಹಳಿಗಳನ್ನು ದಾಟುವುದನ್ನು ತಡೆಯಲು ರೈಲ್ವೆ ಇಲಾಖೆಯು ಇದೇ ಮೊದಲ ಬಾರಿಗೆ ಮುಳ್ಳುತಂತಿ ಬೇಲಿಯ ಅಳವಡಿಕೆಯನ್ನು ಆರಂಭಿಸಿದೆ.

ಪ್ರತಿವರ್ಷ ಮುಂಬೈನ ಲೋಕಲ್ ರೈಲು ಹಳಿಗಳಲ್ಲಿ ಸುಮಾರು 3,000 ಜನರು ಸಾವನ್ನಪ್ಪುತ್ತಾರೆ. ಈ ಪೈಕಿ ಹೆಚ್ಚಿನ ಸಾವುಗಳು ಜನರು ಹಳಿಗಳನ್ನು ದಾಟುವಾಗ ಸಂಭವಿಸುತ್ತಿವೆ. ಜನರು ರೈಲು ಹಳಿಗಳನ್ನು ದಾಟುವುದನ್ನು ತಡೆಯಲು ರೈಲ್ವೆಯು ಈ ಹಿಂದೆ ಹಳಿಗಳುದ್ದಕ್ಕೂ ಸಿಮೆಂಟ್-ಕಾಂಕ್ರೀಟ್ ಗೋಡೆಗಳನ್ನು ನಿರ್ಮಿಸಿತ್ತಾದರೂ ಹೆಚ್ಚಿನ ಕಡೆಗಳಲ್ಲಿ ಅದಕ್ಕೆ ಹಾನಿಯಾಗಿದೆ ಅಥವಾ ಅಕ್ರಮವಾಗಿ ಒಳ ನುಸುಳಲು ಮತ್ತು ಹೊರಗೆ ಹೋಗಲು ಉದ್ದೇಶಪೂರ್ವಕವಾಗಿ ಅದನ್ನು ಒಡೆಯಲಾಗಿದೆ.

ಮುಳ್ಳುತಂತಿ ಬೇಲಿಗಳು ಸಾವುಗಳ ಸಂಖ್ಯೆಯನ್ನು ತಗ್ಗಿಸುತ್ತವೆ ಎಂದು ರೈಲ್ವೆ ಅಧಿಕಾರಿಗಳು ಆಶಯ ವ್ಯಕ್ತಪಡಿಸಿದ್ದಾರೆ.

 ಸೆಂಟ್ರಲ್ ರೈಲ್ವೆಯ ಥಾನೆ-ಐರೋಳಿ, ಕರಿ ರೋಡ್-ಚಿಂಚ್‌ಪೋಕ್ಲಿ ಮತ್ತು ಪರೇಲ್- ದಾದರ್ ನಡುವೆ ಈಗಾಗಲೇ ಮುಳ್ಳುತಂತಿ ಬೇಲಿಗಳನ್ನು ಅಳವಡಿಸಲಾಗಿದೆ. ಹಳಿಗಳನ್ನು ದಾಟಲು ಸಾಮಾನ್ಯವಾಗಿ ಬಳಕೆಯಾಗುತ್ತಿರುವ ಸ್ಥಳಗಳಲ್ಲಿ ನಾವು ಈ ಬೇಲಿಗಳನ್ನು ಹಾಕುತ್ತಿದ್ದೇವೆ ಎಂದು ವಿಭಾಗೀಯ ರೈಲ್ವೆ ಪ್ರಬಂಧಕ ಎಸ್.ಕೆ.ಜೈನ್ ತಿಳಿಸಿದರು.

ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರು ಪ್ಲಾಟ್‌ಫಾರ್ಮ್‌ಗಳನ್ನು ಬದಲಿಸಲು ಪಾದಚಾರಿ ಮೇಲುಸೇತುವೆಗಳನ್ನು ಬಳಸುವ ಬದಲು ಹಳಿಗಳನ್ನು ದಾಟುತ್ತಿದ್ದು, ಇದನ್ನು ತಡೆಯಲು ಈ ಮೊದಲು ಹಳಿಗಳ ನಡುವೆ ಕಬ್ಬಿಣದ ತಡೆಗಳನ್ನು ನಿರ್ಮಿಸಲಾಗಿತ್ತು. ಇದು ನಿರೀಕ್ಷಿತ ಫಲ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News