ಪ್ರತ್ಯೇಕತಾವಾದಿ ನಾಯಕರಾದ ಮಿರ್ವೈಝ್, ಯಾಸೀನ್ ಮಲಿಕ್ ಬಂಧನ
ಶ್ರೀನಗರ, ನ.15: ಬುಧವಾರದಂದು ಪೊಲೀಸರು ಪ್ರತ್ಯೇಕತಾವಾದಿ ನಾಯಕರಾದ ಮಿರ್ವೈಝ್ ಉಮರ್ ಫಾರೂಕ್ ಮತ್ತು ಮುಹಮ್ಮದ್ ಯಾಸೀನ್ ಮಲಿಕ್‌ರನ್ನು ಬಂಧಿಸುವ ಮೂಲಕ ಅವರು ಜಂಟಿಯಾಗಿ ನಡೆಸಲು ಉದ್ದೇಶಿಸಿದ್ದ ಪಾದಯಾತ್ರೆಯನ್ನು ವಿಫಲಗೊಳಿಸಿದರು.
ಪ್ರತ್ಯೇಕತಾವಾದಿ ನಾಯಕರು ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್‌ನ (ಜೆಕೆಎಲ್‌ಎಫ್) ಅಬಿ ಗುಝರ್‌ನಲ್ಲಿರುವ ಕಚೇರಿಯಿಂದ ಲಾಲ್ ಚೌಕ್‌ನತ್ತ ಕಾಲ್ನಡಿಗೆಯಲ್ಲಿ ಆಗಮಿಸುವ ವೇಳೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಇದಕ್ಕೂ ಮುನ್ನ ಇಬ್ಬರು ನಾಯಕರು ಜೆಕೆಎಲ್‌ಎಫ್ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಠಿಯನ್ನು ನಡೆಸಿದರು.
ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಜನರ ಮೇಲೆ ನಡೆಸುತ್ತಿರುವ ದೌರ್ಜನ್ಯ ಖಂಡನೀಯ ಎಂದು ಫಾರೂಕ್ ಈ ವೇಳೆ ತಿಳಿಸಿದರು. ಕಾಶ್ಮೀರ ಕಣಿವೆಯ ಹೊರಗಿನ ಕಾರಾಗೃಹಗಳಲ್ಲಿ ಬಂದಿಯಾಗಿರುವ ಕಾಶ್ಮೀರಿಗಳ ಸ್ಥಿತಿಗತಿಯ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಗಳನ್ನು ನಡೆಸುವ ಜನರೇ ನಂತರ ಬಂದು ಆಡಳಿತಾತ್ಮಕ ನೆರವನ್ನು ಕೋರುತ್ತಾರೆ ಎಂಬ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರ ಹೇಳಿಕೆಯನ್ನು ಖಂಡಿಸಿದ ನಾಯಕರು ಮುಖ್ಯಮಂತ್ರಿಗಳಿಗೆ ಮೂಲ ಸಮಸ್ಯೆಯ ಅರಿವಿಲ್ಲದಿರುವುದನ್ನು ಇದು ಸೂಚಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಜೈಲ್‌ಗಳಲ್ಲಿ ಬಂದಿಯಾಗಿರುವ ಕಾಶ್ಮೀರಿಗಳ ಸಮರ್ಥನೆಯಲ್ಲಿ ನವೆಂಬರ್ 27ರಂದು ಕಣಿವೆ ರಾಜ್ಯದಲ್ಲಿ ಬಂದ್ ಆಚರಿಸುವಂತೆ ಪ್ರತ್ಯೇಕತಾವಾದಿ ನಾಯಕರು ಕರೆ ನೀಡಿದ್ದಾರೆ.