ಗೂಗಲ್ ಪ್ಲೇ ಸ್ಟೋರ್‌ನಿಂದ ಯುಸಿ ಬ್ರೌಸರ್‌ಗೆ ಖೊಕ್

Update: 2017-11-15 15:10 GMT

ಹೊಸದಿಲ್ಲಿ,ನ.15: ಅಂತರ್ಜಾಲವನ್ನು ಜಾಲಾಡಲು ಯುಸಿ ಬ್ರೌಸರ್‌ನ್ನು ಬಳಸುತ್ತಿದ್ದವರಿಗೊಂದು ಕಹಿ ಸುದ್ದಿ ಇಲ್ಲಿದೆ. ಅದನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆಯಲಾಗಿದೆ. ಅಲಿಬಾಬಾ ಒಡೆತನದ ಈ ಮೊಬೈಲ್ ಬ್ರೌಸರ್ ಕಳೆದ ತಿಂಗಳು 500 ಮಿಲಿಯನ್‌ಗೂ ಹೆಚ್ಚು ಸಲ ಡೌನ್‌ಲೋಡ್ ಆಗಿದ್ದು, ಭಾರತದಲ್ಲಿ 100 ಮಿಲಿಯನ್‌ಗೂ ಅಧಿಕ ಅದರ ಬಳಕೆದಾರರಿದ್ದಾರೆ. ಇದೀಗ ಯುಸಿ ಬ್ರೌಸರ್ ಸರ್ಚ್‌ನಲ್ಲಾಗಲೀ ಗೂಗಲ್ ಪ್ಲೇ ಸ್ಟೋರ್‌ನಲ್ಲಾಗಲಿ ಎಲ್ಲಿಯೂ ಕಂಡು ಬರುತ್ತಿಲ್ಲ.

ಆದರೆ ಯುಸಿ ಬ್ರೌಸರ್ ಮಿನಿ ಮತ್ತು ಯುಸಿ ನ್ಯೂಸ್‌ನಂತಹ ಯುಸಿ ವೆಬ್ ಅಪ್ಲಿಕೇಷನ್‌ಗಳು ಈಗಲೂ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿವೆ. ಯುಸಿ ಬ್ರೌಸರ್ ತನ್ನ ಭಾರತೀಯ ಬಳಕೆದಾರರ ಖಾಸಗಿ ಮಾಹಿತಿಗಳನ್ನು ಚೀನಾದಲ್ಲಿನ ಸರ್ವರ್‌ವೊಂದಕ್ಕೆ ರಹಸ್ಯವಾಗಿ ರವಾನಿಸುತ್ತದೆ ಎಂದು ಕಳೆದ ಕೆಲವು ತಿಂಗಳುಗಳಿಂದ ಕೇಳಿ ಬರುತ್ತಿರುವ ವಿದ್ಯಮಾನಗಳ ನಡುವೆಯೇ ಅದಕ್ಕೆ ಗೂಗಲ್ ಪ್ಲೇ ಸ್ಟೋರ್‌ನಿಂದ ಖೊಕ್ ನೀಡಲಾಗಿದೆ.

 ಆದರೆ ಪ್ಲೇ ಸ್ಟೋರ್‌ನಿಂದ ಈ ಆ್ಯಪ್‌ನ ಉಚ್ಚಾಟನೆಯ ಕಾರಣವನ್ನು ಸ್ಪಷ್ಟಪಡಿಸಿ ಗೂಗಲ್ ಅಥವಾ ಯುಸಿ ವೆಬ್ ಈವರೆಗೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.

ಯುಸಿ ವೆಬ್‌ನ ಉದ್ಯೋಗಿಯೆಂದು ಹೇಳಿಕೊಂಡಿರುವ ಮೈಕ್ ರಾಸ್ ಎಂಬ ಟ್ವಿಟರ್ ಬಳಕೆದಾರ, ‘‘ಆ್ಯಪ್‌ನ್ನು 30 ದಿನಗಳ ಅವಧಿಗೆ ತಾತ್ಕಾಲಿವಾಗಿ ತೆಗೆದು ಹಾಕಲಾಗಿದೆ’’ ಎಂದು ಟ್ವೀಟಿಸಿದ್ದಾನೆ.

 ಈ ವರ್ಷದ ಆರಂಭದಲ್ಲಿ ಚೀನಾದಲ್ಲಿಯ ಸರ್ವರ್‌ವೊಂದಕ್ಕೆ ಬಳಕೆದಾರರ ವಿವರಗಳನ್ನು ರವಾನಿಸುತ್ತಿದ್ದಕ್ಕೆ ಯುಸಿ ವೆಬ್ ವಿರುದ್ಧ ತನಿಖೆಯ ವರದಿಗಳಿದ್ದವು. ಆದರೆ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದ ಯುಸಿ ವೆಬ್, ತನ್ನ ಬಳಕೆದಾರರ ಖಾಸಗಿತನ ಮತ್ತು ಸುರಕ್ಷತೆ ತನ್ನ ಅತ್ಯಂತ ಹೆಚ್ಚಿನ ಆದ್ಯತೆಯಾಗಿದೆ ಎಂದು ಹೇಳಿಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News