ಕ್ರಿಸ್ಟಿಯಾನೊ ರೊನಾಲ್ಡೊಗೆ 2017ರ ಬ್ಯಾಲನ್ ಡಿ’ಓರ್ ಟ್ರೋಫಿ

Update: 2017-11-16 18:25 GMT

ಮ್ಯಾಡ್ರಿಡ್, ನ.16: ಬಾರ್ಸಿಲೋನ ಸೂಪರ್ ಸ್ಟಾರ್ ಲಿಯೊನೆಲ್ ಮೆಸ್ಸಿ 2017ರ ಪ್ರತಿಷ್ಠಿತ ಬ್ಯಾಲನ್ ಡಿ’ಓರ್ ಪ್ರಶಸ್ತಿ ಜಯಿಸಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಕ್ರಿಸ್ಟಿಯಾನೊ ರೊನಾಲ್ಡೊ ಐದನೆ ಬಾರಿ ಪ್ರತಿಷ್ಠಿತ ಪ್ರಶಸ್ತಿಯನ್ನು ಜಯಿಸುವ ಮೂಲಕ ಅರ್ಜೆಂಟೀನದ ಪ್ರತಿಸ್ಪರ್ಧಿ ಮೆಸ್ಸಿಯ ಪ್ರಶಸ್ತಿ ದಾಖಲೆಯನ್ನು ಸರಿಗಟ್ಟಲಿದ್ದಾರೆ ಎಂದು ವರದಿಯಾಗಿದೆ.

ರೊನಾಲ್ಡೊ ಅವರು ಮೆಸ್ಸಿಗೆ ದೂರವಾಣಿ ಕರೆ ಮಾಡಿ ಈ ವರ್ಷದ ಬ್ಯಾಲನ್ ಡಿ’ಓರ್ ಪ್ರಶಸ್ತಿಗೆ ತಾನು ಆಯ್ಕೆಯಾಗಿದ್ದಾಗಿ ತಿಳಿಸಿದ್ದಾರೆಂದು ಸ್ಪೇನ್ ದಿನಪತ್ರಿಕೆ ‘ಡಾನ್ ಬಾಲನ್’ ವರದಿ ಮಾಡಿದೆ.

ಟ್ವಿಟರ್‌ನಲ್ಲಿ ಹರಿದಾಡುತ್ತಿರುವ ಫ್ರೆಂಚ್ ಫುಟ್ಬಾಲ್ ಮ್ಯಾಗಝಿನ್‌ನ ಮುಖಪುಟದಲ್ಲಿ ಮೆಸ್ಸಿ 2017ರ ಬ್ಯಾಲನ್ ಡಿ’ಓರ್ ಪ್ರಶಸ್ತಿ ಜಯಿಸಲಿದ್ದಾರೆಂದು ಎಂದು ಬಿಂಬಿಸಲಾಗಿದೆ.

2016-17ರಲ್ಲಿ ರೊನಾಲ್ಡೊ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ರೊನಾಲ್ಡೊ ನಾಯಕತ್ವದಲ್ಲಿ ರಿಯಲ್ ಮ್ಯಾಡ್ರಿಡ್ ತಂಡ ಸತತ ಎರಡನೆ ಬಾರಿ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಜಯಿಸಿದೆ. ಪ್ರಸ್ತುತ ಋತುವಿನಲ್ಲಿ ಮೆಸ್ಸಿ ಈಗಾಗಲೇ 17 ಪಂದ್ಯಗಳಲ್ಲಿ 16 ಗೋಲುಗಳನ್ನು ಬಾರಿಸಿದ್ದಾರೆ. ಮತ್ತೊಂದೆಡೆ, ರೊನಾಲ್ಡೊ 13 ಪಂದ್ಯಗಳಲ್ಲಿ 8 ಗೋಲುಗಳನ್ನು ದಾಖಲಿಸಿದ್ದಾರೆ.

  2007ರಲ್ಲಿ ಬ್ರೆಝಿಲ್‌ನ ಕಾಕಾ ಈ ಪ್ರಶಸ್ತಿಯನ್ನು ಜಯಿಸಿದ್ದರು. ಆ ನಂತರ ಕಳೆದ ಒಂದು ದಶಕದಿಂದ ಬ್ಯಾಲನ್ ಡಿ’ಓರ್ ಪ್ರಶಸ್ತಿಯು ರೊನಾಲ್ಡೊ ಹಾಗೂ ಮೆಸ್ಸಿಯ ಪಾಲಾಗುತ್ತಾ ಬಂದಿದೆ. ಮೆಸ್ಸಿ ದಾಖಲೆ 5 ಬಾರಿ ಈ ಪ್ರಶಸ್ತಿಯನ್ನು ಜಯಿಸಿದ್ದರೆ, ರೊನಾಲ್ಡೊ ಈ ತನಕ 4 ಬಾರಿ ಈ ಟ್ರೋಫಿಯನ್ನು ಗೆದ್ದುಕೊಂಡಿದ್ದಾರೆ.

ಅಕ್ಟೋಬರ್‌ನಲ್ಲಿ ಪ್ರಶಸ್ತಿಗೆ 30 ಮಂದಿಯನ್ನು ನಾಮ ನಿರ್ದೇಶನ ಮಾಡಲಾಗಿತ್ತು. ಡಿ.7 ರಂದು ಈ ವರ್ಷದ ವಿಜೇತರನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News