ದಿಲ್ಲಿಯ ಹೊಗೆಮಂಜು: ವೈದ್ಯರ ಎಚ್ಚರಿಕೆಯ ಮಧ್ಯೆಯೂ ಮ್ಯಾರಥಾನ್‌ನಲ್ಲಿ ಸಾವಿರಾರು ಮಂದಿ ಭಾಗಿ

Update: 2017-11-19 13:23 GMT

ಹೊಸದಿಲ್ಲಿ, ನ.19: ಹೊಗೆಮಂಜು ಮತ್ತು ಆರೋಗ್ಯದ ಮೇಲೆ ಪರಿಣಾಮದ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ ಹೊರತಾಗಿಯೂ ರವಿವಾರ ನಡೆದ ಹಾಫ್ ಮ್ಯಾರಥಾನ್‌ನಲ್ಲಿ ಸಾವಿರಾರು ಮಂದಿ ಭಾಗವಹಿಸುವ ಮೂಲಕ ಹೊಗೆಮಂಜಿನಿಂದ ಕೆಟ್ಟುಹೋಗಿರುವ ದಿಲ್ಲಿಯ ವಾತಾವರಣಕ್ಕೆ ಸವಾಲು ಹಾಕಿದರು.

ರಾಷ್ಟ್ರರಾಜಧಾನಿಯಲ್ಲಿ ನಡೆದ ಈ ಹಾಫ್ ಮ್ಯಾರಥಾನ್‌ನಲ್ಲಿ ಭಾಗವಹಿಸಲು 35,000 ಮಂದಿ ಹೆಸರು ನೋಂದಾಯಿಸಿದ್ದರು. ದಿಲ್ಲಿಯಲ್ಲಿ ದಟ್ಟ ಹೊಗೆಮಂಜು ವ್ಯಾಪಿಸಿರುವ ಕಾರಣ ಶಾಲೆಗಳಿಗೆ ಹಲವು ದಿನಗಳ ಕಾಲ ರಜೆ ಘೋಷಿಸಲಾಗಿತ್ತು.

ರವಿವಾರದಂದು ದಿಲ್ಲಿಯ ವಾತಾವರಣದಲ್ಲಿ ಸಣ್ಣ ಮತ್ತು ಅತ್ಯಂತ ಅಪಾಯಕಾರಿ ವಾಯುಜನಿತ ಮಾಲಿನ್ಯದ ಮಟ್ಟ 189 ತಲುಪಿದೆ ಎಂದು ಅಮೆರಿಕಾ ರಾಯಭಾರ ಕಚೇರಿಯ ಜಾಲತಾಣ ತಿಳಿಸಿದ್ದು ಇದು ವಿಶ್ವ ಆರೋಗ್ಯ ಸಂಸ್ಥೆ ಸುರಕ್ಷಿತ ಎಂದು ಸೂಚಿಸಿರುವ ಮಟ್ಟಕ್ಕಿಂತ ಎಂಟು ಪಟ್ಟು ಹೆಚ್ಚಾಗಿದೆ.

ಮುಂಜಾನೆಯ ದಟ್ಟ ಮಂಜಿನಲ್ಲಿ ಮುಖಕ್ಕೆ ಕವಚ ಹಾಕಿಕೊಂಡು ಓಡಿದ ಕೆಲವು ಓಟಗಾರರು ಮಾಲಿನ್ಯಪೀಡಿತ ಪರಿಸ್ಥಿತಿಯಿಂದಾಗಿ ಆರೋಗ್ಯದಲ್ಲಿ ಏರುಪೇರಾಗಿರುವ ಬಗ್ಗೆ ದೂರು ನೀಡಿದ್ದಾರೆ.

ದಕ್ಷಿಣ ಬೆಂಗಳೂರಿನಿಂದ ದಿಲ್ಲಿಗೆ ಮ್ಯಾರಥಾನ್‌ನಲ್ಲಿ ಭಾಗವಹಿಸಲು ತೆರಳಿದ್ದ 30ರ ಹರೆಯದ ರೋಹಿತ್ ಮೋಹನ್, ನನ್ನ ಕಣ್ಣುಗಳು ಉರಿಯುತ್ತಿವೆ, ಗಂಟಲು ಒಣಗಿದೆ ಮತ್ತು ಶೀತ ಬಾಧಿಸುತ್ತಿದೆ. ನಿನ್ನೆ ನಾನು ಇಲ್ಲಿಗೆ ಬಂದಿಳಿದ ಸಮಯದಿಂದಲೂ ಪರಿಸ್ಥಿತಿ ಬಹಳ ಕೆಟ್ಟದಾಗಿದೆ ಎಂದು ತಿಳಿಸಿದ್ದರು.

ದಿಲ್ಲಿಯ ಮಾಲಿನ್ಯ ಮಟ್ಟವನ್ನು ಸಾರ್ವಜನಿಕ ಆರೋಗ್ಯದ ತುರ್ತುಸ್ಥಿತಿ ಎಂದು ಬಣ್ಣಿಸಿರುವ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಮಾಲಿನ್ಯದಲ್ಲಿ ಉಂಟಾಗಿರುವ ಏರಿಕೆಯ ಕಾರಣದಿಂದ ಹಾಫ್ ಮ್ಯಾರಥಾನ್‌ನ್ನು ಮುಂದೂಡುವಂತೆ ಕೋರಿತ್ತು. ಆದರೆ, ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿರುವುದಾಗಿ ತಿಳಿಸಿದ್ದ ಸಂಘಟಕರ ಮಾತಿನಿಂದ ತೃಪ್ತರಾದ ನ್ಯಾಯಾಧೀಶರು ಕಾರ್ಯಕ್ರಮದ ಆಯೋಜನೆಗೆ ಹಸಿರು ನಿಶಾನೆ ನೀಡಿದ್ದರು.

ಗಂಭೀರ ಮಾಲಿನ್ಯ ಪರಿಸ್ಥಿತಿಯಲ್ಲಿ ಓಡುವುದರಿಂದ ಅಸ್ತಮಾ ಆಘಾತವಾಗಬಹುದು, ಶ್ವಾಸಕೋಶದ ಸ್ಥಿತಿ ಕೆಡಬಹುದು ಮತ್ತು ಹೃದಯಾಘಾತ ಮತ್ತು ಸ್ಟ್ರೋಕ್‌ಗಳ ಸಾಧ್ಯತೆ ಹೆಚ್ಚಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದರು. ಈ ಎಲ್ಲಾ ಎಚ್ಚರಿಕೆಗಳನ್ನು ಗಾಳಿಗೆ ತೂರಿದ ಸ್ಥಳೀಯ ಹವ್ಯಾಸಿ ಓಟಗಾರರು ಮುಖ ಕವಚಗಳನ್ನು ಧರಿಸದೆಯೇ ಓಡಿದರು.

“ಮಾಲಿನ್ಯ ಕೆಟ್ಟದ್ದು ಮತ್ತು ಅದು ನನ್ನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನನಗೆ ಗೊತ್ತು. ಆದರೂ ನಾನು ಈ ಓಟದಲ್ಲಿ ಭಾಗವಹಿಸುತ್ತಿದ್ದೇನೆ. ಆಮೂಲಕ ರೋಗ್ಯದ ಬಗ್ಗೆ ಕಾಳಜಿಯಿರುವವರಿಗೆ ಮಾಲಿನ್ಯ ರಹಿತ ವಾತಾವರಣವನ್ನು ನಿರ್ಮಿಸುವಂತೆ ಸರಕಾರಕ್ಕೆ ಸಂದೇಶ ರವಾನಿಸಲು ಬಯಸುತ್ತೇವೆ” ಎಂದು ಹೇಳುತ್ತಾರೆ ಸಿತಂ ಎಂಬ ಓರ್ವ ಓಟಗಾರ.

ದಿಲ್ಲಿ ಆಡಳಿತವು ನಗರದ ವಾಯುಗುಣಮಟ್ಟವನ್ನು ಉತ್ತಮಗೊಳಿಸದೆ ಹೋದರೆ ಕಾರ್ಯಕ್ರಮದ ಪ್ರಾಯೋಜಕತ್ವದಿಂದ ಹಿಂದೆ ಸರಿಯುವುದಾಗಿ ಕಳೆದ ವಾರ ಏರ್‌ಟೆಲ್ ಎಚ್ಚರಿಸಿತ್ತು. ವಾತಾವರಣದ ಧೂಳಿನ ಮಟ್ಟವನ್ನು ಕಡಿಮೆ ಮಾಡಲು ಆಯೋಜಕರು ಮ್ಯಾರಥಾನ್ ಸಾಗಲಿರುವ ರಸ್ತೆಗಳಿಗೆ ನೀರು ಸಿಂಪಡಿಸಿದ್ದರು.

2014ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ದಿಲ್ಲಿಯು ಜಗತ್ತಿನ ಅತೀಹೆಚ್ಚು ಮಾಲಿನ್ಯಪೀಡಿತ ರಾಜಧಾನಿಯಾಗಿದೆ ಎಂದು ತಿಳಿದುಬಂದಿತ್ತು. ದಿಲ್ಲಿಯ ವಾಯುಮಾಲಿನ್ಯ ಮಟ್ಟವು ಬೀಜಿಂಗ್‌ಗಿಂತಲೂ ಅಧಿಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News