ಭಾರತದಲ್ಲಿ 73.2 ಕೋ.ಜನರು ಶೌಚಾಲಯ ಸೌಲಭ್ಯ ವಂಚಿತರು: ವರದಿ

Update: 2017-11-19 13:48 GMT

ಹೊಸದಿಲ್ಲಿ,ನ.19: ಶೌಚಾಲಯ ಸೌಲಭ್ಯವಿಲ್ಲದ ವಿಶ್ವದ ಅತ್ಯಂತ ಹೆಚ್ಚಿನ ಸಂಖ್ಯೆಯ, 73.2 ಕೋಟಿ ಜನರು ಭಾರತದಲ್ಲಿದ್ದಾರೆ ಎಂದು ಅಂತರರಾಷ್ಟ್ರೀಯ ದತ್ತಿಸಂಸ್ಥೆ ವಾಟರ್ ಏಡ್ ತನ್ನ ವರದಿಯಲ್ಲಿ ಹೇಳಿದೆ.

  ಈ ಎಲ್ಲ ಜನರು ಸರದಿಯಲ್ಲಿ ನಿಂತರೆ ಆ ಸಾಲು ನಾಲ್ಕು ಬಾರಿ ಪೃಥ್ವಿಯನ್ನು ಸುತ್ತು ಹಾಕುವಷ್ಟು ದೊಡ್ಡದಾಗಿರುತ್ತದೆ ಎಂದು ವಿಶ್ವ ಶೌಚಾಲಯ ದಿನ(ರವಿವಾರ)ದ ಮುನ್ನ ಬಿಡುಗಡೆಗೊಂಡಿರುವ ವರದಿಯು ಬೆಟ್ಟು ಮಾಡಿದೆ. ಮಹಿಳೆಯರು ಮತ್ತು ಬಾಲಕಿಯರು ಅತ್ಯಂತ ತೀವ್ರ ಬಾಧಿತರಾಗಿದ್ದು, ಇಂತಹ 35 ಕೋ.ಜನರು ಪ್ರಾಥಮಿಕ ನೈರ್ಮಲ್ಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಅದು ಹೇಳಿದೆ.

ತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು, ‘‘ವಿಶ್ವ ಶೌಚಾಲಯ ದಿನದಂದು ದೇಶಾದ್ಯಂತ ನೈರ್ಮಲ್ಯ ಸೌಲಭ್ಯಗಳನ್ನು ಉತ್ತಮಗೊಳಿಸುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ. ಭಾರತದ ವಿವಿಧ ಭಾಗಗಳಲ್ಲಿ ಹೆಚ್ಚೆಚ್ಚು ಶೌಚಾಲಯಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ನಾನು ಅಭಿನಂದಿಸುತ್ತೇನೆ. ಅವರ ಅಮೂಲ್ಯ ಕೊಡುಗೆಯು ಸ್ವಚ್ಛ ಭಾರತ ಅಭಿಯಾನಕ್ಕೆ ಇನ್ನಷ್ಟು ಬಲವನ್ನು ನೀಡುತ್ತದೆ’’ ಎಂದು ರವಿವಾರ ಟ್ವೀಟಿಸಿದ್ದಾರೆ.

ಸ್ವಚ್ಛ ಭಾರತ ಅಭಿಯಾನದಡಿ ಭಾರತವು ತ್ವರಿತ ಪ್ರಗತಿಯನ್ನು ಮಾಡುತ್ತಿದೆಯಾದರೂ ಭಿನ್ನ ಸಾಮರ್ಥ್ಯದವರು, ಹಿರಿಯ ವ್ಯಕ್ತಿಗಳು, ಕಡುಬಡವರು, ಮಹಿಳೆಯರು ಮತ್ತು ವಯಸ್ಕ ಬಾಲಕಿಯರಿಗೆ ನಿರ್ದಿಷ್ಟವಾದ ಸುರಕ್ಷಿತ ಶೌಚಾಲಯಗಳ ಲಭ್ಯತೆಯ ಮಹತ್ವವನ್ನು ನಾವು ಗುರುತಿಸುವ ಅಗತ್ಯವಿದೆ ಎಂದು ವಾಟರ್ ಏಡ್ ಇಂಡಿಯಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿ.ಕೆ.ಮಾಧವನ್ ಹೇಳಿದರು.

ಸ್ವಚ್ಛ ಭಾರತ ಅಭಿಯಾನದಡಿ 2019,ಅ.2ರ ವೇಳೆಗೆ ಭಾರತವನ್ನು ಶೇ.100 ರಷ್ಟು ಬಯಲು ಶೌಚ ಮುಕ್ತವಾಗಿಸುವ ಗುರಿಯನ್ನು ಹೊಂದಲಾಗಿದ್ದು, ಇದಕ್ಕಾಗಿ 2017, ಅಕ್ಟೋಬರ್-2019 ರ ನಡುವೆ 12 ಕೋಟಿ ನೂತನ ಶೌಚಾಲಯಗಳ ನಿರ್ಮಾಣ ಅಗತ್ಯವಿದೆ. 2017,ನವೆಂಬರ್‌ವರೆಗೆ ಈ ಕಾರ್ಯಕ್ರಮದಡಿ ಕೇವಲ 5.38 ಕೋಟಿ ನೂತನ ಶೌಚಾಲಯಗಳು ನಿರ್ಮಾಣಗೊಂಡಿವೆ.

ಗುಜರಾತ್ ತನ್ನ ಶೌಚಾಲಯ ನಿರ್ಮಾಣ ಗುರಿಯನ್ನು ಸಾಧಿಸಿರುವ ಏಕೈಕ ರಾಜ್ಯವಾಗಿದೆ ಎಂಂದು ಟಿಇಆರ್‌ಇ ವಿವಿಯು ಈ ಹಿಂದೆ ಬಿಡುಗಡೆಗೊಳಿಸಿರುವ ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News