ಅಯಾನಾ, ಬೆರ್ಹಾನುಗೆ ಚಿನ್ನ

Update: 2017-11-19 18:14 GMT

ಹೊಸದಿಲ್ಲಿ, ನ.19: ವರ್ಷದ ವಿಶ್ವ ಅಥ್ಲೀಟ್ ಇಥಿಯೋಪಿಯದ ಅಲ್ಮಾಝ್ ಅಯಾನಾ ದಿಲ್ಲಿ ಹಾಫ್ ಮ್ಯಾರಥಾನ್‌ನ ಮಹಿಳೆಯರ ವಿಭಾಗದಲ್ಲಿ ಚಿನ್ನ ಜಯಿಸಿದರು. ಪುರುಷರ ವಿಭಾಗದಲ್ಲಿ ಬೆರ್ಹಾನು ಲೆಗೆಸೆ ಮೊದಲ ಸ್ಥಾನ ಪಡೆದರು.

 ವಾಯು ಮಾಲಿನ್ಯದಿಂದಾಗಿ ದಿಲ್ಲಿಯಲ್ಲಿ ಮ್ಯಾರಥಾನ್ ನಡೆಯುವ ಬಗ್ಗೆ ಸಂಶಯವಿತ್ತು. ಆದರೆ 35,000ದಷ್ಟು ದಿಲ್ಲಿ ನಿವಾಸಿಗಳು ರವಿವಾರ ನಡೆದ ಮ್ಯಾರಥಾನ್‌ನಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಭಾಗವಹಿಸಿದರು.

ರಿಯೋ ಒಲಿಂಪಿಕ್ಸ್‌ನಲ್ಲಿ 10,000 ಮೀ. ಓಟದಲ್ಲಿ ವಿಶ್ವ ದಾಖಲೆ ನಿರ್ಮಿಸಿ ಚಿನ್ನ ಜಯಿಸಿದ್ದ ಅಯಾನಾ ರೋಡ್ ರೇಸ್‌ನಲ್ಲೂ ತನ್ನ ಫಾರ್ಮ್ ಮುಂದುವರಿಸಿದ್ದು ಒಂದು ಗಂಟೆ, ಏಳು ನಿಮಿಷ ಹಾಗೂ 11 ಸೆಕೆಂಡ್‌ನಲ್ಲಿ ಗುರಿ ತಲುಪುವ ಮೂಲಕ ಮೊದಲ ಬಾರಿ ಹಾಫ್ ಮ್ಯಾರಥಾನ್ ರೇಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

    ಇಥಿಯೋಪಿಯದ ಓಟಗಾರ್ತಿಯರು ಮೊದಲ ಮೂರು ಸ್ಥಾನ ಪಡೆದರು. ಮಹಿಳೆಯರ ಓಟದಲ್ಲಿ ಅಯಾನ ಸಹ ಆಟಗಾರ್ತಿಯರಾದ ಅಬಬೆಲ್ ಯೆಶಾನೆಹ್(1:07:19) ಹಾಗೂ ನೆಟ್‌ಸನೆಟ್ ಗುಡೆಟಾ(1:07:24) ಕ್ರಮವಾಗಿ 2ನೆ ಹಾಗೂ ಮೂರನೆ ಸ್ಥಾನ ಪಡೆದರು.

  ಪುರುಷರ ಇಲೈಟ್ ರೇಸ್‌ನಲ್ಲಿ 2015ರ ವಿನ್ನರ್ ಬೆರ್ಹಾನು ಲೆಗೆಸೆ 59 ನಿಮಿಷ, 46 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಇಥಿಯೋಪಿಯದ ಇನ್ನೋರ್ವ ಅಥ್ಲೀಟ್ ಅನಡಂಲಕ್ ಬೆಲಿಹು(59.51) ಹಾಗೂ ಅಮೆರಿಕದ ಲಿಯೊನಾರ್ಡ್ ಕೊರಿರ್(59.52) ಕ್ರಮವಾಗಿ 2ನೆ ಹಾಗೂ 3ನೆ ಸ್ಥಾನ ಪಡೆದಿದ್ದಾರೆ.

 ವಿಶ್ವ ಮ್ಯಾರಥಾನ್‌ನ ಹಾಲಿ ಚಾಂಪಿಯನ್ ಕೀನ್ಯದ ಜಿಯೊಫ್ರೆ ಕಿರುಯಿ(1:00.04)6ನೆ ಸ್ಥಾನ ಪಡೆದಿದ್ದಾರೆ. ಅಯಾನಾ ಹಾಗೂ ಲೆಗೆಸೆ 27,000 ಯುಎಸ್ ಡಾಲರ್ ಬಹುಮಾನ ಪಡೆದರು.

ನಿತೇಂದ್ರ ಸಿಂಗ್ ರಾವತ್(1:03:53) ಭಾರತೀಯರ ವಿಭಾಗದ ಓಟದಲ್ಲಿ ಮೊದಲ ಸ್ಥಾನ ಪಡೆದರು. ಜಿ.ಲಕ್ಷ್ಮಣನ್(1:03:53)ರಾವತ್ ಸಮಯವನ್ನು ಸರಿಗಟ್ಟಿದರೂ ಸೆಕೆಂಡ್ ಅಂತರದಲ್ಲಿ ಹಿಂದೆ ಬಿದ್ದ ಕಾರಣ ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಮಹಾರಾಷ್ಟ್ರದ ಅವಿನಾಶ್ ಸಾಬ್ಲೆ(1:03:58) ಮೂರನೆ ಸ್ಥಾನ ಪಡೆದರು. ಭಾರತೀಯ ಮಹಿಳೆಯರ ರೇಸ್‌ನಲ್ಲಿ ಎಲ್.ಸೂರ್ಯಾ ಮೊದಲ ಸ್ಥಾನ ಪಡೆದರೆ, ಸುಧಾ ಸಿಂಗ್ ಹಾಗೂ ಪಾರುಲ್ ಚೌಧರಿ ಮೊದಲ ಹಾಗೂ ಎರಡನೆ ರನ್ನರ್ ಅಪ್ ಎನಿಸಿಕೊಂಡರು. ಪುರುಷ ಹಾಗೂ ಮಹಿಳಾ ವಿಜೇತರು ತಲಾ 3 ಲಕ್ಷ ರೂ. ಬಹುಮಾನ ಪಡೆದರೆ, 2ನೆ ಹಾಗೂ 3ನೆ ಸ್ಥಾನ ಪಡೆದವರು 2.5 ಲಕ್ಷ ರೂ. ಹಾಗೂ 1.75 ಲಕ್ಷ ರೂ. ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News