ದಲಿತ ಬುದ್ಧಿಜೀವಿಗಳೆಂಬ ಸೆಲೆಕ್ಟಿವ್ ಹೋರಾಟಗಾರರು!

Update: 2017-11-19 18:38 GMT

ಮಾನ್ಯರೆ,

ಕೆಲವು ದಲಿತ ಬುದ್ಧಿಜೀವಿಗಳ ವಲಯ ಅಂತ ಕರೆಸಿಕೊಳ್ಳುವ, ಕರೆದುಕೊಳ್ಳುವ ಈ ನಾಡಿನ ಒಂದು ಚಿಂತನಾ ವಲಯ ಈ ಕಾಲಕ್ಕೂ ಸಹ, ಇನ್ನೂ ಕಮ್ಯುನಿಸ್ಟ್ಟ್ ಚಿಂತನೆಗಳಿಂದ ತಮ್ಮನ್ನು ತಾವು ಬಾಯಿ, ಮನಸ್ಸು ಕಟ್ಟಿಕೊಂಡು ಹೋರಾಟಗಳನ್ನು ರೂಪಿಸುವುದರಲ್ಲಿ ಕೂಡ ಸೆಲೆಕ್ಟಿವ್ ಆಗಿರುವುದನ್ನು ಗಮನಿಸಿದಾಗ ಇವರೆಲ್ಲಾ ಸಮುದಾಯಗಳಿಗೆ ಯಾವ ಸಂದೇಶ ನೀಡಲು ಹೊರಟಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಸಾಹಿತಿಯಾಗಿ, ಬರಹಗಾರರಾಗಿ ತಮ್ಮ ಬರವಣಿಗೆಯಿಂದ ಶಬ್ದ ಮಾಡಬೇಕಿದ್ದವರೆಲ್ಲಾ ಇವತ್ತಿಗೆ ತಾವು ಯಾವ ಹಿರಿಯ ಮೇಲ್ಜಾತಿಗೆ ಸೇರಿದ ಸಾಹಿತಿಗಳ ಜೊತೆಯಿದ್ದೇವೆ, ಯಾವ ವಾದದಡಿಯಲ್ಲಿ ಗುರುತಿಸಿಕೊಂಡಿದ್ದೇವೆ ಎಂಬುದು ಮುಖ್ಯವಾಗಿ ಹೋದಂತಿದೆ. ಅಷ್ಟರ ಮಟ್ಟಿಗೆ ಇಂದು ಒಂದು ರೀತಿಯ ಸಾಂಸ್ಕೃತಿಕ, ಸಾಹಿತ್ಯಕ, ವೈಚಾರಿಕ ಜೀತಗಾರಿಕೆ ಚಾಲ್ತಿಯಲ್ಲಿದೆ ಎಂಬ ಅನುಮಾನವಿದೆ.

ದಲಿತ ಸಾಹಿತಿಯಾದವನು ಎಡಪಂಥೀಯನಾಗಿಯೇ ಇರಬೇಕೆಂಬ ಕಟ್ಟುಕತೆಯನ್ನು ನಿಜವೆಂದು ಒಪ್ಪಿಕೊಂಡು, ಅಕಾಡಮಿಕ್ ಕಾರಣಗಳ ಸಲುವಾಗಿ ನಾಳಿನ ಯಾವುದೋ ಸರಕಾರ ನೀಡುವ ಪುರಸ್ಕಾರಗಳಿಗೋ, ಯಾವುದೋ ಅಧ್ಯಕ್ಷಗಾದಿಗೋ, ಹೆಸರಿನ ಹುಚ್ಚಿಗೋ ಬಿದ್ದಂತಿರುವ ಈ ವಲಯ ಆ ಕಾರಣಕ್ಕೆ ತನ್ನ ಸಮುದಾಯದ ಹಿತಚಿಂತನೆಯನ್ನು ಸಂದರ್ಭಕ್ಕೆ ತಕ್ಕ ಹಾಗೆ ಮಾತ್ರವೇ ಬಳಸುವ ಚಾಣಾಕ್ಷತನ ಮಾತ್ರ ಹೇಸಿಗೆ ಹುಟ್ಟಿಸುವಂತದ್ದು. ಪರಿಶಿಷ್ಟರ ಭಡ್ತಿ ಮೀಸಲಾತಿ ಕುರಿತಂತೆ, ಗೋ.ಮಧುಸೂದನ್ ಅವರ ಸಂವಿಧಾನದ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಆ ವಲಯದ ಧ್ವನಿಯೇ ಇಲ್ಲವಾಗಿದ್ದು ಮಾತ್ರ ನಿಜಕ್ಕೂ ವಿಷಾದನೀಯ. ಇಲ್ಲಿ ಇಂತಹ ಘಟನೆಗಳ ಬಗ್ಗೆ ಒಬ್ಬ ಸಮುದಾಯದ ನಿಷ್ಠ ಕಾಳಜಿಯುಳ್ಳವನಾಗಿ ಆ ವಲಯದ ಧ್ವನಿಯನ್ನು ಯಜಮಾನಿಕೆ ನಡೆಸುತ್ತಿರುವ ಈ ಚಿಂತನೆಗಳು ನಯವಾಗಿ ದಮನ ಮಾಡಿಬಿಟ್ಟಿವೆ.

ಆ ವಲಯ ಮೇಲ್ಜಾತಿಗರ ಪಾಠಗಳಿಗಾಗಿ ಜಾಹೀರಾತು ಮಾಡಿಕೊಂಡು, ಬಾಬಾಸಾಹೇಬರಿಗಿಂತಲೂ ಹೆಚ್ಚಿನದಾದ ಅದೇನೋ ಅದ್ಭುತಗಳನ್ನು ಕಾಣುತ್ತಿರುವಂತೆ ಧಾವಂತಗಳಲ್ಲಿ ಕುಣಿದಾಡಿಕೊಂಡು ಈ ಕಾಲದಲ್ಲಿಯೂ ಸಹ ಅದೇ ಬಂಡವಾಳಶಾಹಿ, ಆರ್ಥಿಕ ನೀತಿಗಳು, ಜಿಎಸ್‌ಟಿ ಬಗೆಗಿನ ಮಾರ್ಕ್ಸ್‌ವಾದಿ ಚಿಂತನೆಗಳಿಗಾಗಿಯೇ ತಮ್ಮ ಕಿವಿಗಳನ್ನು ಅಡವಿಟ್ಟುಕೊಂಡು ಎದೆಯ ಬಾಗಿಲನ್ನು ಬಂದ್ ಮಾಡಿಕೊಂಡಿರುವುದು ಮಾತ್ರ ವಿಪರ್ಯಾಸ.

ಹಾಗಾಗಿ ಇವರಿಗೆ ದಲಿತ ವಿಷಯಗಳ ಬಗ್ಗೆ ಮಾತನಾಡುವ ವಿಷಯಗಳಾಗುವುದಿಲ್ಲ. ಇವರು ಗೋ.ಮಧುಸೂದನ್ ಬಗ್ಗೆ ಖಂಡಿಸುವುದಿಲ್ಲ. ಭಡ್ತಿ ಮೀಸಲಾತಿ ಬಗ್ಗೆ ಚರ್ಚೆ ಮಾಡುವುದಿಲ್ಲ ಯಾಕೆಂದರೆ, ಇದು ಜಾತಿ ಸಂಬಂಧಿತ. ಕಮ್ಯುನಿಸ್ಟ್ಟರು ಜಾತಿಯ ಇರುವಿಕೆಗಿಂತ ವರ್ಗದ ಇರುವಿಕೆ ಬಗ್ಗೆ ಮಾತ್ರ ತಾನೇ ಮಾತನಾಡುವುದು. ಹಾಗಾಗಿ ಇವರಿಗೆ ಇಂತಹ ವಿಷಯಗಳ ಬಗ್ಗೆ ಬಾಯಿ ಬಂದ್ ಆಗಿಬಿಡುತ್ತದೆ ಅಂತ ಅನ್ನಿಸುತ್ತದೆ. ಒಟ್ಟಾರೆಯಾಗಿ ದಲಿತ ಬುದ್ಧ್ದಿಜೀವಿಗಳು ಸಹ ದಲಿತಸಂಬಂಧಿತ ಹೋರಾಟಗಳ ವಿಚಾರದಲ್ಲಿ ಸೆಲೆಕ್ಟಿವ್ ಹೋರಾಟಗಾರರಾಗಿಬಿಟ್ಟರಲ್ಲ ಎಂಬುದು ಮಾತ್ರ ಈ ಹೊತ್ತಿನ ದೊಡ್ಡ ಮೋಸ. ಜಾತಿ ಎಂಬುದು ಆವಶ್ಯಕತೆಗೆ ಮಾತ್ರ ಸ್ವಾರ್ಥಕ್ಕೆ ಬಳಕೆ ಮಾಡುವ ನಾಣ್ಯ ಆಗಿರುವುದು ದುರಂತ. ಆದಷ್ಟು ಬೇಗ ಇಂತಹವರಿಗೆ ಜ್ಞಾನೋದಯವಾಗಲಿ.

Writer - -ಅಪ್ಪಗೆರೆ ಡಿ.ಟಿ. ಲಂಕೇಶ್

contributor

Editor - -ಅಪ್ಪಗೆರೆ ಡಿ.ಟಿ. ಲಂಕೇಶ್

contributor

Similar News