ಬೇಕರಿ ಕಾರ್ಮಿಕನ ಪುತ್ರಿಯ ಕನಸು ನನಸಿಗೆ ಅಡ್ಡಿಯಾಗದ ಹಿಜಾಬ್

Update: 2017-11-20 13:07 GMT

ಹೈದರಾಬಾದ್,ನ.20: ಆ ಯುವತಿ ದಶಕದ ಹಿಂದೆ ಕಾರ್ಯಕ್ರಮವೊಂದರಲ್ಲಿ ‘ಮುಂದೇನಾಗಬಯಸುತ್ತೀಯಾ’ ಎಂಬ ಪ್ರಶ್ನೆಗೆ ‘ಪೈಲಟ್’ಎಂದು ಉತ್ತರಿಸಿದ್ದಳು. ಅಂದಿನಿಂದಲೇ ಆ ಬಡ ಬೇಕರಿ ಕಾರ್ಮಿಕನ ಪುತ್ರಿಯ ಕನಸಿಗೆ ರೆಕ್ಕೆಗಳು ಮೂಡತೊಡಗಿದ್ದವು. ಹಿಜಾಬ್ ಧಾರಿ ಸೈದಾ ಸಲ್ವಾ ಫಾತಿಮಾ ಈಗ ವಿಮಾನಯಾನ ಸಂಸ್ಥೆಯೊಂದನ್ನು ಸೇರಲು ಸಜ್ಜಾಗಿದ್ದಾರೆ ಮತ್ತು ವಾಣಿಜ್ಯಿಕ ವಿಮಾನ ಚಾಲನೆ ಪರವಾನಿಗೆ(ಸಿಪಿಎಲ್) ಹೊಂದಿರುವ ಭಾರತದ ನಾಲ್ವರು ಮುಸ್ಲಿಂ ಮಹಿಳೆಯರಲ್ಲಿ ಓರ್ವರಾಗಿದ್ದಾರೆ.

 ಇತ್ತೀಚಿಗಷ್ಟೇ ನ್ಯೂಝಿಲಂಡ್‌ನಲ್ಲಿ ಬಹು ಇಂಜಿನ್ ವಿಮಾನ ಹಾರಾಟದ ತರಬೇತಿಯೊಂದಿಗೆ ಬೆಹರಿನ್‌ನಲ್ಲಿ ಟೈಪ್ ರೇಟಿಂಗ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿರುವ ಸಲ್ವಾ ಈಗ ಏರ್‌ಬಸ್ ಎ320 ವಿಮಾನವನ್ನು ಹಾರಿಸಲು ನಾಗರಿಕ ವಾಯುಯಾನ ಮಹಾ ನಿರ್ದೇಶಕರಿಂದ ಅನುಮತಿಗಾಗಿ ಕಾಯುತ್ತಿದ್ದಾರೆ.

ಆದರೆ ತನ್ನ ಜೀವನದ ಮಹತ್ವಾಕಾಂಕ್ಷೆಯನ್ನು ಸಾಧಿಸುವುದು ಹೈದರಾಬಾದ್‌ನ ಹಳೆಯ ನಗರದ ಸುಲ್ತಾನ್ ಶಾಹಿ ಪ್ರದೇಶದ ಬಡ ಕುಟುಂಬದಿಂದ ಬಂದಿರುವ ಸಲ್ವಾ ಪಾಲಿಗೆ ಸುಲಭವಾಗಿರಲಿಲ್ಲ, ಅಡಿಗಡಿಗೂ ತೊಡಕುಗಳನ್ನು ಎದುರಿಸುತ್ತಲೇ ಆಕೆ ಗೆಲುವು ಸಾಧಿಸಿದ್ದಾರೆ.

ಸಲ್ವಾ ಕೆಳ ಮಧ್ಯಮ ವರ್ಗಕ್ಕೆ ಸೇರಿದವಳಾಗಿದ್ದಾರೆ ಮತ್ತು ಭಾರತದಲ್ಲಿ ಹಾಗೂ ವಿದೇಶದಲ್ಲಿ ತನ್ನ ತರಬೇತಿಯುದ್ದಕ್ಕೂ ಹಿಜಾಬ್ ಧರಿಸಿಕೊಂಡೇ ಇದ್ದರು ಎನ್ನುವುದು ಅವರ ಕಥೆಯನ್ನು ಭಿನ್ನವಾಗಿಸಿದೆ.

"ನಾನು ಸದಾ ಕಾಲ ಹಿಜಾಬ್ ಧರಿಸಿಕೊಂಡೇ ಇರುತ್ತಿದ್ದೆ, ಸಮವಸ್ತ್ರ ಧರಿಸಿದಾಗಲೂ ಅದನ್ನು ತೊರೆದಿರಲಿಲ್ಲ. ಹಿಜಾಬ್‌ನಿಂದಾಗಿ ನನಗೆಂದೂ ಸಮಸ್ಯೆಯಾಗಿರಲಿಲ್ಲ" ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಲ್ವಾ ತಿಳಿಸಿದರು.

ಹಿಜಾಬ್ ಧರಿಸಿದ್ದಕ್ಕಾಗಿ ಬೆಹರಿನ್‌ನ ಗಲ್ಫ್ ಏವಿಯೇಷನ್ ಅಕಾಡೆಮಿಯಲ್ಲಿ ಆಕೆ ಪ್ರಶಂಸೆಗೆ ಪಾತ್ರಳಾಗಿದ್ದು, ಸಂಸ್ಥೆಯ ಮ್ಯಾಗಝಿನ್‌ನಲ್ಲಿ ಹಿಜಾಬ್ ಧರಿಸಿದ್ದ ಆಕೆಯ ಚಿತ್ರಗಳೂ ಪ್ರಕಟವಾಗಿದ್ದವು.

ಮನಸ್ಸಿದ್ದಲ್ಲಿ ಮಾರ್ಗವಿದೆ ಎನ್ನುವ ಸಲ್ವಾ, ವಿಮಾನ ಚಾಲನೆಯಂತಹ ವೃತ್ತಿಗಳನ್ನು ಅರಸಲು ಹಿಜಾಬ್ ಅಡಚಣೆಯಾಗಿದೆ ಎಂಬ ತಪ್ಪುಗ್ರಹಿಕೆ ನಿವಾರಣೆಯಾಗಬೇಕೆಂದು ಪ್ರತಿಪಾದಿಸಿದ್ದಾರೆ.

ಪೈಲಟ್ ಅಥವಾ ಇನ್ಯಾವುದೇ ವೃತ್ತಿಯಾಗಿರಲಿ, ನಮ್ಮ ಶಿಕ್ಷಣ ಮತ್ತು ಸಾಮರ್ಥ್ಯ ಮಾತ್ರ ನೆರವಾಗುತ್ತದೆಯೇ ಹೊರತು ಬೇರೆ ಯಾವುದೇ ವಿಷಯ ಮುಖ್ಯವಲ್ಲ. ನೀವು ಏನನ್ನು ಮಾಡಬೇಕೆಂದು ನಿರೀಕ್ಷಿಸಲಾಗಿದೆಯೋ ಅದನ್ನು ಮಾಡಲು ನೀವು ಸಮರ್ಥರಿದ್ದೀರಿ ಎನ್ನುವುದನ್ನು ಸಾಬೀತು ಮಾಡಬೇಕಾಗುತ್ತದೆ ಎಂದು ಸಲ್ವಾ ಹೇಳಿದರು.

 ಸಲ್ವಾ ತನ್ನ ಶಾಲಾದಿನಗಳಿಂದಲೂ ವೈಮಾನಿಕ ಉದ್ಯಮದ ಕುರಿತ ಲೇಖನಗಳು ಮತ್ತು ವಿಮಾನಗಳ ಚಿತ್ರಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದರು. ಆದರೆ ಆಕೆಯ ಕನಸನ್ನು ಜನರು ಗೇಲಿ ಮಾಡುತ್ತಿದ್ದರು. 12ನೇ ತರಗತಿಯಲ್ಲಿ ತೇರ್ಗಡೆಗೊಂಡ ಬಳಿಕ ಆಕೆ ತನ್ನ ಹೆತ್ತವರ ಸಲಹೆಯಂತೆ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ತರಬೇತಿಗಾಗಿ ಉರ್ದು ದೈನಿಕ ‘ಸಿಯಾಸತ್’ ನಡೆಸುತ್ತಿದ್ದ ಕೋಚಿಂಗ್ ಸೆಂಟರ್‌ಗೆ ಸೇರಿಕೊಂಡಿದ್ದರು.

ಅಲ್ಲಿಯ ಕಾರ್ಯಕ್ರಮವೊಂದರಲ್ಲಿ ಸಿಯಾಸತ್‌ನ ಸಂಪಾದಕ ಝಾಹಿದ್ ಅಲಿ ಖಾನ್ ಅವರು ‘ಮುಂದೇನಾಗಲು ಬಯಸುತ್ತೀಯಾ’ ಎಂದು ಪ್ರಶ್ನಿಸಿದ್ದರು. ಸಲ್ವಾ ‘ಪೈಲಟ್’ ಎಂದು ಚುರುಕಾಗಿ ಉತ್ತರಿಸಿದಾಗ ಖಾನ್ ಅಚ್ಚರಿಗೊಳಗಾಗಿದ್ದರು.

"ನಾನಂದು ‘ಪೈಲಟ್’ ಎಂಬ ಶಬ್ದವನ್ನು ಉಸುರದಿದ್ದರೆ ನಾನಿಂದು ಪೈಲಟ್ ಆಗುತ್ತಿರಲಿಲ್ಲ" ಎಂದು ಸಲ್ವಾ ನೆನಪಿಸಿಕೊಂಡರು.

ಖಾನ್ ತನ್ನ ಗೆಳೆಯರು ಮತ್ತು ದಾನಿಗಳೊಂದಿಗೆ ಸೇರಿಕೊಂಡು ಸಲ್ವಾರ ಕನಸಿಗೆ ರೆಕ್ಕೆಗಳನ್ನು ನೀಡಲು ನಿರ್ಧರಿಸಿದ್ದರು. ಪರಿಣಾಮವಾಗಿ ಆಕೆ 2007ರಲ್ಲಿ ಆಂಧ್ರಪ್ರದೇಶ ಏವಿಯೇಷನ್ ಅಕಾಡೆಮಿಗೆ ಸೇರಲು ಸಾಧ್ಯವಾಗಿತ್ತು.

ನೇವಿಗೇಷನ್ ಪರೀಕ್ಷೆಯಲ್ಲಿ ಸಲ್ವಾ ಮೂರು ಬಾರಿ ಅನುತ್ತೀರ್ಣಗೊಂಡಿದ್ದರು. ಪ್ರತಿ ಬಾರಿ ಅನುತ್ತೀರ್ಣಗೊಂಡಾಗಲೂ ಸಲ್ವಾ ಉತ್ಸಾಹವನ್ನು ಕಳೆದುಕೊಳ್ಳುತ್ತಿದ್ದರು. ಆದರೆ ಖಾನ್ ಆಕೆಯನ್ನು ಉತ್ತೇಜಿಸುತ್ತಲೇ ಇದ್ದರು. ಸೋಲು ಗೆಲುವಿನ ಮೆಟ್ಟಿಲು ಎನ್ನುವುದನ್ನು ಅವರು ಆಕೆಗೆ ಸದಾ ನೆನಪಿಸುತ್ತಿದ್ದರು. ಐದು ವರ್ಷಗಳ ಬಳಿಕ ಸಲ್ವಾ ಸಂಸ್ಥೆಯಲ್ಲಿ ಯಶಸ್ವಿಯಾಗಿ ತರಬೇತಿ ಮುಗಿಸಿಕೊಂಡು ಹೊರಬಂದಿದ್ದರು. ಸೆಸ್ನಾ 152 ವಿಮಾನದ 200 ಗಂಟೆಗಳ ಹಾರಾಟದೊಡನೆ,123 ಗಂಟೆಗಳ ಕಾಲ ಏಕಾಂಗಿಯಾಗಿ ವಿಮಾನವನ್ನು ಹಾರಿಸಿದ್ದರು.

2013ರಲ್ಲಿ ಸಿಪಿಎಲ್ ಕೈಸೇರಿತ್ತಾದರೂ ಬೃಹತ್ ವಿಮಾನಗಳನ್ನು ಹಾರಿಸಲು ಅಗತ್ಯವಾದ ಬಹು ಇಂಜಿನ್ ತರಬೇತಿ ಪಡೆಯಲು, ಟೈಪ್ ರೇಟಿಂಗ್ ಮಾಡಲು ಲಕ್ಷಾಂತರ ರೂ.ಗಳು ಬೇಕಾಗಿದ್ದವು.

 ಆಗ 24 ವರ್ಷ ವಯಸ್ಸಾಗಿದ್ದ ಸಲ್ವಾ ಮದುವೆ ಮಾಡಿಕೊಳ್ಳುವಂತೆ ಹೆತ್ತವರ ಸಲಹೆಯನ್ನು ಒಪ್ಪಿಕೊಂಡಿದ್ದರು. "ನನಗೆ ಬೇರೆ ಆಯ್ಕೆಯೇ ಇರಲಿಲ್ಲ. ಮುಂದಿನ ತರಬೇತಿಗೆ ಹಣ ಎಲ್ಲಿಂದ ಬರುತ್ತದೆ ಎನ್ನುವುದು ನನಗೆ ಗೊತ್ತಿರಲಿಲ್ಲ" ಎಂದು ಸಲ್ವಾ ಹೇಳಿದರು.

ಕಾರ್ ಶೋರೂಮ್ ಉದ್ಯೋಗಿಯ ಕೈ ಹಿಡಿದ ಸಲ್ವಾ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಗ ತೆಲಂಗಾಣ ಸರಕಾರವು ಆಕೆಗೆ ಅಗತ್ಯವಿದ್ದ 36 ಲಕ್ಷ ರೂ.ಗಳ ಆರ್ಥಿಕ ನೆರವನ್ನು ಪ್ರಕಟಿಸಿತ್ತು.

ಹೆಣ್ಣುಮಗುವಿಗೆ ಜನನ ನೀಡಿದ ಬಳಿಕ ಪೈಲಟ್ ವೃತ್ತಿಯನ್ನು ಸೇರುವ ಬಗ್ಗೆ ಪ್ರಯತ್ನಿಸುವುದಿಲ್ಲವೇ ಎಂದು ಜನರು ಆಕೆಯನ್ನು ಕೇಳುತ್ತಲೇ ಇದ್ದರು ಮತ್ತು ತಾನು ವೃತ್ತಿಪರ ಪೈಲಟ್ ಆಗಲೇಬೇಕೆಂದು ಸಲ್ವಾ ನಿರ್ಧರಿಸಿದ್ದರು.

ಒಂದು ವರ್ಷದ ಬಳಿಕ ಬಹು ಇಂಜಿನ್ ತರಬೇತಿಗಾಗಿ ಆಕೆ ತೆಲಂಗಾಣ ಏವಿಯೇಷನ್ ಅಕಾಡೆಮಿಯನ್ನು ಸೇರಿದ್ದರಾದರೂ ಅಗತ್ಯ ವಿಮಾನ ಅಲ್ಲಿರಲಿಲ್ಲ. ಸರಕಾರವು ಆಕೆಯ ತರಬೇತಿಯನ್ನು ಜಿಎಂಆರ್ ಏವಿಯೇಷನ್ ಅಕಾಡೆಮಿಗೆ ವರ್ಗಾಯಿಸಿತ್ತಾದರೂ ಆಕೆ ಇನ್ನೇನು ತರಬೇತಿ ಪ್ರಾರಂಭಿಸಬೇಕು ಎಂದಿದ್ದಾಗ ವಿಮಾನ ಅಪಘಾತದಿಂದಾಗಿ ನೆಲವನ್ನು ಕಚ್ಚಿಕೊಂಡಿತ್ತು. ಆದರೆ ಇದರಿಂದ ಹತಾಶರಾಗದ ಸಲ್ವಾ ತರಬೇತಿಗಾಗಿ ತನ್ನನ್ನು ವಿದೇಶಕ್ಕೆ ಕಳುಹಿಸುವಂತೆ ಸರಕಾರವನ್ನು ಕೋರಿಕೊಂಡಿದ್ದರು ಮತ್ತು ಅದು ಅಸ್ತು ಎಂದಿತ್ತು.

ಇದೀಗ ನ್ಯೂಝಿಲಂಡ್‌ನಲ್ಲಿ ಮತ್ತು ಬೆಹರಿನ್‌ನಲ್ಲಿ ತರಬೇತಿ ಮುಗಿಸಿಕೊಂಡು ಬಂದಿರುವ ಸಲ್ವಾ ವೃತ್ತಿಪರ ಪೈಲಟ್ ಆಗಲು ಸಜ್ಜಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News