‘ಗುಜರಾತ್ ಮಾದರಿ’ ಈಗೆಲ್ಲಿ ಹೋಯಿತು?

Update: 2017-11-20 18:17 GMT

ಮಾನ್ಯರೆ,

ಮುಂದಿನ ತಿಂಗಳು ಗುಜರಾತಿನಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದೆ ಹಾಗೂ ಈಗ ಅಲ್ಲಿ ಜಿದ್ದಾ ಜಿದ್ದಿ ಪ್ರಚಾರ ನಡೆಯುತ್ತಿದ್ದರೂ ಯಾರೂ ಒಂದಕ್ಷರ ‘ಗುಜರಾತ್ ಮಾದರಿ’ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿಲ್ಲ ಎಂಬುದು ಆಶ್ಚರ್ಯವಲ್ಲವೇ? ಯಾಕೆಂದರೆ ಮೂಲದಲ್ಲಿ ಯಾವುದೇ ‘ಗುಜರಾತ್ ಮಾದರಿ’ ಅಭಿವೃದ್ಧಿ ಇರಲೇ ಇಲ್ಲ. ಅದು ಮೋದಿಯವರಿಗಾಗಿ ಅಮೆರಿಕನ್ ಪ್ರಚಾರ ಕಂಪೆನಿ ವರ್ಲ್ಡ್ ವೈಡ್ ತಯಾರಿಸಿದ ಮಾರ್ಕೆಟಿಂಗ್ ತಂತ್ರ ಮಾತ್ರವಾಗಿತ್ತು. ಮೋದಿ ಮತ್ತು ಅವರ ಅಮೆರಿಕನ್ ಪ್ರಚಾರ ಕಂಪೆನಿ ಭಾರತದ ಎಲ್ಲ ಮತದಾರರನ್ನು ‘ಗುಜರಾತ್ ಮಾದರಿ’ ಅಭಿವೃದ್ಧಿ ಹೆಸರಲ್ಲಿ ಮಂಗ ಮಾಡಿದರು ಎಂಬುದು ನಿಜ.

ಆಗೆಲ್ಲಾ ಮೋದಿಯ ಹಿಂಬಾಲಕರು ‘ಗುಜರಾತ್ ಮಾದರಿ’ ಬಗ್ಗೆ ಪರೋಕ್ಷ ಪ್ರಚಾರ ಮಾಡಲು ಮಂಗಳೂರಿನ ಬೈಕಂಪಾಡಿಯಿಂದ ತಮ್ಮ ಫ್ಯಾಕ್ಟರಿಯನ್ನು ಗುಜರಾತಿಗೆ ವರ್ಗಾಯಿಸುವುದಾಗಿ ಕಾರ್ಮಿಕರನ್ನು ಬೆದರಿಸುತ್ತಿದ್ದರು. ಆದರೆ ನಿಜವಾಗಿ ಅವರಿಗೆಲ್ಲಾ ಗುಜರಾತಿಗೆ ಶಿಫ್ಟ್ ಮಾಡುವ ಯಾವುದೇ ಉದ್ದೇಶ ಇರಲಿಲ್ಲ. ಅಷ್ಟೇ ಅಲ್ಲ, ಸ್ವತಃ ಮೋದಿಯ ಹಿಂಬಾಲಕರಾದ ಅದಾನಿ ಕಂಪೆನಿಯೇ ತಮ್ಮ ಪಾಮೋಲಿನ್ ಎಣ್ಣೆ ಮತ್ತು ತೊಗರಿ ಬೇಳೆ ವಿದೇಶ ದಿಂದ ಆಮದು ಮಾಡಿ ದಾಸ್ತಾನು ಮಾಡುತ್ತಿರುವುದು ನವಮಂಗಳೂರು ಬಂದರಿನಲ್ಲಿಯೇ. ಅದಾನಿಯವರು ವಿದ್ಯುತ್ ಉತ್ಪಾದಿಸಿ ಮಾರುತ್ತಿರುವುದು ಕರ್ನಾಟಕದಲ್ಲಿ ಮತ್ತು ತಮಿಳುನಾಡಿನಲ್ಲಿ. ಕನ್ನಡಿಗ ಉದ್ಯಮಿಗಳು ಗುಜರಾತಿಗೆ ವಲಸೆ ಹೋಗುವ ಮಾತು ಒತ್ತಟ್ಟಿಗಿರಲಿ, ಗುಜರಾತಿ ಕಂಪೆನಿಗಳೇ ಕರ್ನಾಟಕದಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುತ್ತಿವೆ. ಹಾಗಾದರೆ ಮೋದಿಯವರ ‘ಗುಜರಾತ್ ಮಾದರಿ’ ಅಭಿವೃದ್ಧಿ ಯಾವ ಮೂಲೆ ಸೇರಿದೆ?

ಮೋದಿಯವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ತೂರಿಬಿಟ್ಟಿದ್ದ ‘ಗುಜರಾತ್ ಮಾದರಿ’ ಅಭಿವೃದ್ಧಿ ಕೇವಲ ಪ್ರಚಾರದ ಗಾಳಿ ಊದಿದ ಬಲೂನ್ ಮಾತ್ರ ಆಗಿದ್ದು, ಆ ಬಲೂನ್ ಈಗ ಠುಸ್ ಆಗಿದೆ. ಅಭಿವೃದ್ಧಿಯ ಎಲ್ಲಾ ಕ್ಷೇತ್ರದಲ್ಲೂ ಕರ್ನಾಟಕವು ಗುಜರಾತಿಗಿಂತ ತುಂಬಾ ಮುಂದಿದೆ ಎಂದು ರಾಷ್ಟ್ರೀಯ ಅಂಕಿಸಂಖ್ಯೆಗಳೇ ಹೇಳುತ್ತವೆ.

-ಉದಯರಾಜ್ ಬಿ.ಆಳ್ವ, ಕಾಟಿಪಳ್ಳ, ಸುರತ್ಕಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News