ಸರಕಾರಿ ಆಸ್ಪತ್ರೆಗಳಿಗೆ ಕಾಯಕಲ್ಪವಾಗಲಿ

Update: 2017-11-20 18:19 GMT

ಮಾನ್ಯರೆ,

ಒಂದು ಕಾಲವಿತ್ತು. ಕೆಎಸ್ಸಾರ್ಟಿಸಿ ಬಸ್ಸು ಅಂದ್ರೆ ಜನ ಮಾರುದ್ದ ದೂರ ಸರಿಯುತ್ತಿದ್ದ ಸಮಯವದು. ಅದರ ಪ್ರಯಾಣದ ನರಕಯಾತನೆ ಜನರನ್ನು ರೇಜಿಗೆ ಸಿಲುಕಿಸುತ್ತಿತ್ತು. ಅಂತಹ ಕೆಎಸ್ಸಾರ್ಟಿಸಿ ಸಂಸ್ಥೆಗೆ ಕಾಯಕಲ್ಪನೀಡಿ ದೇಶದಲ್ಲೇ ನಂಬರ್ ವನ್ ಸಂಸ್ಥೆಯಾಗಿ ಪರಿವರ್ತಿಸಿದ ಕೀರ್ತಿ ಕರ್ನಾಟಕ ಸರಕಾರದ ಸಾರಿಗೆ ಇಲಾಖೆಗೆ ಸಲ್ಲುತ್ತದೆ. ಹಿಂದೆ ಮಂಗಳೂರಿನಿಂದ ಬೆಂಗಳೂರಿಗೆ ಕಾರಿನಲ್ಲೇ ಸಂಚರಿಸುತ್ತಿದ್ದ ಉದ್ಯಮಿಗಳು, ಅಧಿಕಾರಿಗಳು ಕೂಡಾ ಇಂದು ತಮ್ಮ ದುಬಾರಿ ಕಾರುಗಳನ್ನು ಮನೆಯಲ್ಲಿರಿಸಿ ಕೆಎಸ್ಸಾರ್ಟಿಸಿ ಬಸ್ಸಿಗೆ ಹತ್ತುತ್ತಾರೆಂದರೆ ಅದರ ಗುಣಮಟ್ಟ ಉನ್ನತಮಟ್ಟದಲ್ಲಿರುವುದೇ ಕಾರಣವಾಗಿದೆ.

ಇದೇ ತತ್ವದಡಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಸರಕಾರಿ ಆಸ್ಪತ್ರೆಗಳಿಗೆ ಭರ್ಜರಿ ಸರ್ಜರಿ ಮಾಡಿ ಸರಿದಾರಿಗೆ ತರುತ್ತಿದ್ದರೆ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ತನ್ನಿಂತಾನೇ ಕಡಿವಾಣ ಬೀಳುತ್ತಿರಲಿಲ್ಲವೇ? ಸರಕಾರಿ ಆಸ್ಪತ್ರೆಗಳ ದುಸ್ಥಿತಿ ನೋಡಿದರೆ, ಅಲ್ಲಿನ ಅವ್ಯವಸ್ಥೆಯನ್ನು ಅವಲೋಕಿಸಿ ಪರಿಹರಿಸಿದರೆ ಖಾಸಗಿಗಿಂತಲೂ ಉತ್ತಮ ಸೇವೆ ಸರಕಾರದಿಂದಲೂ ನೀಡಬಹುದು. ರಾಜ್ಯದ ಮೂಲೆ ಮೂಲೆಗಳಲ್ಲಿ ಸರಕಾರಿ ಆಸ್ಪತ್ರೆಯ ಕಟ್ಟಡಗಳಿವೆ. ಬೇಕಾದಷ್ಟು ಔಷಧಿಯ ವಿತರಣೆಯೂ ಆಗುತ್ತದೆ. ವೈದ್ಯರ ಉತ್ಪಾದನೆಯೂ ವರ್ಷದಿಂದ ವರ್ಷಕ್ಕೆ ಇಮ್ಮಡಿಯಾಗುತ್ತಿದೆ. ಆಸ್ಪತ್ರೆಗೆ ಬೇಕಾದ ಉಪಯುಕ್ತ ಸಲಕರಣೆಗಳು, ಸಿಬ್ಬಂದಿಗೆ ಕೊರತೆಯಿಲ್ಲ. ಇವೆಲ್ಲವೂ ಇದ್ದು ಕೂಡಾ ಸರಕಾರಿ ಆಸ್ಪತ್ರೆಗಳು ಯಥೇಚ್ಛವಾಗಿ ಕಾರ್ಯನಿರ್ವಹಿಸುವಲ್ಲಿ ಎಡವಿವೆ. ಹೀಗಾಗಿ ಈ ಸಮಸ್ಯೆಯ ಬಗ್ಗೆ ಸರಕಾರ ಮೊದಲು ಗಮನ ನೀಡಿ ಆನಂತರ ಬೇರೆಯವರ ಬಗ್ಗೆ ಕೈ ತೋರಿಸಲಿ.

-ರಶೀದ್ ವಿಟ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News