ಬಿಡುವಿಲ್ಲದ ವೇಳಾಪಟ್ಟಿ: ಬಿಸಿಸಿಐ ವಿರುದ್ಧ ಕೊಹ್ಲಿ ಅಸಮಾಧಾನ

Update: 2017-11-23 17:49 GMT

ಹೊಸದಿಲ್ಲಿ, ನ.23: ಈಗ ನಡೆಯುತ್ತಿರುವ ಶ್ರೀಲಂಕಾ ವಿರುದ್ಧ ಸುದೀರ್ಘ ಸರಣಿ ಕೊನೆಗೊಂಡ ತಕ್ಷಣ ಭಾರತ ತಂಡ ದಕ್ಷಿಣ ಆಫ್ರಿಕಕ್ಕೆ ಪ್ರವಾಸ ಕೈಗೊಳ್ಳಲಿದೆ. ಬಿಸಿಸಿಐಯ ಇಂತಹ ಇಕ್ಕಟ್ಟಿನ ವೇಳಾಪಟ್ಟಿಯ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ‘‘ದಕ್ಷಿಣ ಆಫ್ರಿಕ ಸರಣಿಗೆ ತಯಾರಿ ನಡೆಸಲು ನಮಗೆ ಹೆಚ್ಚು ಸಮಯ ಸಿಗುತ್ತಿಲ್ಲ. ಟೀಮ್ ಮ್ಯಾನೇಜ್‌ಮೆಂಟ್‌ಗೆ ಬೇರೆ ಆಯ್ಕೆಯಿಲ್ಲ. ಆದರೆ, ಈಗ ನಡೆಯುತ್ತಿರುವ ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಬೌನ್ಸಿ ಪಿಚ್ ಸಿದ್ಧಪಡಿಸುವಂತೆ ಮನವಿ ಸಲ್ಲಿಸಲಾಗಿದೆ’’ ಎಂದು ಕೊಹ್ಲಿ ಹೇಳಿದ್ದಾರೆ.

ನೀವು ಬೌನ್ಸಿ ಪಿಚ್ ರಚನೆಗೆ ಬೇಡಿಕೆ ಇಟ್ಟಿದ್ದೀರಾ ಎಂದು ಕೇಳಿದಾಗ, ನೇರ ಉತ್ತರ ನೀಡಿದ ಕೊಹ್ಲಿ‘‘ಬೇಡಿಕೆ ಇಟ್ಟಿದ್ದು ನಿಜ. ಏಕೆಂದರೆ ಶ್ರೀಲಂಕಾ ವಿರುದ್ಧ ಸುದೀರ್ಘ ಸರಣಿ ಕೊನೆಗೊಂಡ ಎರಡು ದಿನಗಳ ಬಳಿಕ ದಕ್ಷಿಣ ಆಫ್ರಿಕ ಪ್ರವಾಸಕೈಗೊಳ್ಳಬೇಕಾಗಿದೆ. ಇದು ದುರದೃಷ್ಟಕರ. ನಮ್ಮಲ್ಲಿ ಆಯ್ಕೆಯಿಲ್ಲ. ಪಂದ್ಯದ ಪರಿಸ್ಥಿತಿಗೆ ಹೊಂದಿಕೊಳ್ಳಲು ಪ್ರಯತ್ನಿಸಿ, ಮುಂದೇನಾಗುತ್ತದೆ ಎಂದು ಯೋಚಿಸಲಿದ್ದೇವೆ’’ ಎಂದರು.

 ‘‘ಎರಡು ತಂಡಗಳ ಸರಣಿಯ ನಡುವೆ ಒಂದು ತಿಂಗಳ ವಿರಾಮದ ಅಗತ್ಯವಿದೆ. ಹೀಗಿದ್ದರೆ ಮಾತ್ರ ನಮಗೆ ಉತ್ತಮ ತಯಾರಿ ನಡೆಸಲು ಸಾಧ್ಯವಾಗುತ್ತದೆ. ನಾವು ವಿದೇಶಕ್ಕೆ ಕ್ರಿಕೆಟ್ ಪ್ರವಾಸ ಕೈಗೊಂಡಾಗ ಎಲ್ಲರೂ ಸುಲಭವಾಗಿ ತಂಡದ ವೌಲ್ಯಮಾಪನ ಮಾಡುತ್ತಾರೆ. ಟೆಸ್ಟ್ ಪಂದ್ಯ ಫಲಿತಾಂಶದ ಬಳಿಕ ಎಲ್ಲರೂ ತೀರ್ಪು ನೀಡಲು ಆರಂಭಿಸುತ್ತಾರೆ. ನಮಗೆ ನಿರ್ದಿಷ್ಟ ಸ್ಥಳಕ್ಕೆ ಹೋಗುವ ಮೊದಲು ತಯಾರಿ ನಡೆಸಲು ಎಷ್ಟು ದಿನ ಲಭಿಸಿತ್ತು ಎಂದು ಯಾರೂ ಯೋಚಿಸುವುದಿಲ್ಲ’’ ಎಂದರು.

ಭಾರತೀಯ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧ ಡಿ.24 ರಂದು ಟ್ವೆಂಟಿ-20 ಸರಣಿಯಲ್ಲಿ ಫೈನಲ್ ಪಂದ್ಯ ಆಡಲಿದೆ. ಡಿ.27 ರಂದು ದಕ್ಷಿಣ ಆಫ್ರಿಕಕ್ಕೆ ಪ್ರವಾಸ ಕೈಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News