ಸಾಹಿತಿಗಳು ಸಮಾಜದ ಧ್ವನಿಯಾಗಲಿ

Update: 2017-11-26 18:37 GMT

ಮಾನ್ಯರೆ,

ಹದಿನೆಂಟನೆಯ ಶತಮಾನದಲ್ಲಿ ಹಲವು ಪ್ರಾಂತಗಳಾಗಿ ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸಿ ಸಮಗ್ರ ಸುಂದರ ನವ ಕರ್ನಾಟಕದ ನಿರ್ಮಾಣಕ್ಕಾಗಿ ಅಂದು ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು, ಚನ್ನಬಸಪ್ಪನವರಂಥ ಹಲವು ಸಾಹಿತಿಗಳು ತಮ್ಮ ಬರವಣಿಗೆ ಮತ್ತು ಸಾಹಿತ್ಯದ ಮೂಲಕ ಕನ್ನಡಿಗರಲ್ಲಿ ಭಾವನಾತ್ಮಕ ಐಕ್ಯತೆ, ಭಾಷಾಭಿಮಾನ ಮೂಡಿಸಿ ಸಮಸ್ತ ಕನ್ನಡಿಗರೆಲ್ಲರೂ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು. ಇದರಿಂದಾಗಿಯೇ 1753 ರಂದು ಕರ್ನಾಟಕ ಸಂಸ್ಕೃತಿ ಮರು ನಿರ್ಮಾಣಗೊಳ್ಳಲು ಸಹಕಾರವಾಯಿತು. ನಂತರ ಕುವೆಂಪು, ಶಿವರಾಮ ಕಾರಂತ, ದ.ರಾ ಬೇಂದ್ರೆ, ಮಾಸ್ತಿಯವರಂಥ ಶ್ರೇಷ್ಠ ಸಾಹಿತಿಗಳು ರಚಿಸಿದ ಸಾಹಿತ್ಯದಿಂದ ಕನ್ನಡ ನಾಡು ನುಡಿ, ನೆಲ ಜಲ, ಸಂಸ್ಕೃತಿ ಪರಂಪರೆ ಶ್ರೀಮಂತಗೊಂಡಿತು. ಈ ಸಾಹಿತಿಗಳ ಏಕತೆ, ಭಾವೈಕ್ಯ ಮೂಡಿಸುವಂತ ಹಲವು ಸಾಹಿತ್ಯ ಕೃತಿಗಳ ರಚನೆಯಿಂದಾಗಿ ಕನ್ನಡ ಭಾಷೆ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಸಾಹಿತ್ಯದಲ್ಲಿನ ಅತ್ಯುನ್ನತ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ನಮ್ಮ ಕನ್ನಡ ಭಾಷೆಗೆ ತಂದುಕೊಡುವ ಮೂಲಕ ವಿಶ್ವ ಮಾನವರೆನಿಸಿದ್ದಾರೆ. ಅಲ್ಲದೇ ಕನ್ನಡ ಸಾಹಿತ್ಯದ ಮಹಾನ್ ಚೇತನರೆನಿಸಿದ್ದಾರೆ.
ಆದರೆ ಪ್ರಸ್ತುತ ಸಮಾಜದಲ್ಲಿರುವ ಸಾಹಿತಿಗಳು ಮಾತ್ರ ತಮ್ಮ ತತ್ವ, ಸಿದ್ಧಾಂತಗಳನ್ನು ಗಾಳಿಗೆ ತೂರಿದ್ದಾರೆ. ಕನ್ನಡ ನಾಡು ನುಡಿ ಕಟ್ಟುವ ಕೆಲಸ ಮರೆತಿದ್ದಾರೆ. ಎಡಪಂಥೀಯ-ಬಲಪಂಥೀಯ ಎಂದು ಗುರುತಿಸಿಕೊಂಡು ತಮ್ಮ ಸಾಹಿತ್ಯ ಹಾಗೂ ವಿವಾದಾತ್ಮಕ ಭಾಷಣದ ಮೂಲಕ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ರಾಜಕೀಯ ಪಕ್ಷಗಳಿಗೆ ಅಂಟಿಕೊಂಡು ಕನ್ನಡ ಸಾಹಿತ್ಯವನ್ನು ಕಲುಷಿತಗೊಳಿಸುತ್ತಿದ್ದಾರೆ. ಇದರಿಂದಾಗಿ ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಮೇಲೆ ಇದ್ದ ಗೌರವ ಇವರಿಂದ ಹಾಳಾಗುತ್ತಿದೆ. ಆದ್ದರಿಂದ ಇನ್ನೂ ಮುಂದೆಯಾದರೂ ನಮ್ಮ ಸಾಹಿತಿಗಳು ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿ ಪರಂಪರೆಯನ್ನು ಶ್ರೀಮಂತಗೊಳಿಸುವಂಥ ಸಾಹಿತ್ಯವನ್ನು ರಚಿಸಿ ಸಮಾಜದ ಧ್ವನಿಯಾಗಲಿ.
 

Similar News