×
Ad

ನಕ್ಸಲ್- ಸಿಆರ್‌ಪಿಎಫ್ ಗುಂಡಿನ ಚಕಮಕಿ

Update: 2017-11-27 19:09 IST

ನಾಗ್‌ಪುರ, ನ.27: ಮಹಾರಾಷ್ಟ್ರದ ಗಢ್‌ಚಿರೋಲಿ ಜಿಲ್ಲೆಯ ಗ್ಯಾರಾಪಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡಿಯಲ್‌ಮೆಟ್ಟ ಅರಣ್ಯಪ್ರದೇಶದಲ್ಲಿ ನಕ್ಸಲ್ ಹಾಗೂ ಸಿಆರ್‌ಪಿಎಫ್ ಪಡೆ ಮದ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಧಾರವಾಡದ ಯೋಧ ಮಂಜುನಾಥ್ ಶಿವಲಿಂಗಪ್ಪ ಹುತಾತ್ಮರಾಗಿದ್ದು ಇಬ್ಬರು ಯೋಧರು ಗಾಯಗೊಂಡಿದ್ದಾರೆ.

ಮಹಾರಾಷ್ಟ್ರ ಪೊಲೀಸರ ನೆರವಿನೊಂದಿಗೆ ಸಿಆರ್‌ಪಿಎಫ್ ಯೋಧರು ಅರಣ್ಯ ಪ್ರದೇಶದಲ್ಲಿ ನಕ್ಸಲರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಎರಡು ಬಾರಿ ಗುಂಡಿನ ಚಕಮಕಿ ನಡೆದಿದೆ. ರವಿವಾರ ಸಂಜೆ ಸುಮಾರು 6 ಗಂಟೆಗೆ ಹಾಗೂ 7:50 ಗಂಟೆಗೆ ಸಿಆರ್‌ಪಿಎಫ್ ಪಡೆಯ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದು ಯೋಧರು ಕೂಡಾ ಪ್ರತಿ ದಾಳಿ ನಡೆಸಿದ್ದಾರೆ. ಇದರಿಂದ ನಕ್ಸಲರಿಗೆ ಸಾಕಷ್ಟು ನಷ್ಟವಾಗಿದ್ದು ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ ಎಂದು ಸಿಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.

  ನಕ್ಸಲರ ಗುಂಡಿನ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ ಕರ್ನಾಟಕದ ದಾರವಾಡ ಮೂಲದ ಸಿಆರ್‌ಪಿಎಫ್ ಯೋಧ ಮಂಜುನಾಥ್ ಶಿವಲಿಂಗಪ್ಪ ಬಳಿಕ  ಮೃತರಾಗಿದ್ದಾರೆ. ಉಳಿದಂತೆ ದೀಪಕ್ ಶರ್ಮ ಮತ್ತು ಲೋಕೇಶ್ ಕುಮಾರ್ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

  ಕಳೆದ ನಾಲ್ಕು ದಿನದಲ್ಲಿ ಗಢ್ ಚಿರೋಲಿಯಲ್ಲಿ ನಕ್ಸಲ್-ಭದ್ರತಾ ಪಡೆಗಳ ನಡುವೆ ನಡೆದಿರುವ ನಾಲ್ಕನೇ ಎನ್‌ಕೌಂಟರ್ ಪ್ರಕರಣ ಇದಾಗಿದೆ. ನ.24ರಂದು ನಡೆದ ಎನ್‌ಕೌಂಟರ್‌ನಲ್ಲಿ ಪೊಲೀಸ್ ಸಿಬ್ಬಂದಿ ಮೃತರಾಗಿದ್ದು ಇಬ್ಬರು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News