ಶ್ರೀಲಂಕಾದ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕನಾಗಿ ಪೆರೇರ

Update: 2017-11-29 18:35 GMT

ಕೊಲಂಬೊ, ನ.29: ಭಾರತ ವಿರುದ್ಧದ ಮುಂಬರುವ ಏಕದಿನ ಹಾಗೂ ಟ್ವೆಂಟಿ-20 ಸರಣಿಗೆ ತಿಸ್ಸಾರ ಪೆರೇರ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಉಪುಲ್ ತರಂಗರನ್ನು ಏಕದಿನ ಕ್ರಿಕೆಟ್ ತಂಡದ ನಾಯಕತ್ವದಿಂದ ಕೈಬಿಡಲಾಗಿದೆ.

ತರಂಗ ನಾಯಕತ್ವದಲ್ಲಿ ಶ್ರೀಲಂಕಾ ತಂಡ ಸತತ ಸೋಲನ್ನು ಕಂಡಿದೆ. 32ರ ಹರೆಯದ ಆರಂಭಿಕ ಆಟಗಾರ ತರಂಗ ನಾಯಕತ್ವದಲ್ಲಿ ಶ್ರೀಲಂಕಾ ತಂಡ ಈ ವರ್ಷ ಭಾರತ, ದಕ್ಷಿಣ ಆಫ್ರಿಕ ಹಾಗೂ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಒಂದೂ ಪಂದ್ಯವನ್ನು ಗೆಲ್ಲದೇ ಶರಣಾಗಿತ್ತು.

ಶ್ರೀಲಂಕಾ ತಂಡ ಪಾಕ್ ವಿರುದ್ಧ ಸೀಮಿತ ಓವರ್ ಕ್ರಿಕೆಟ್‌ನ್ನು ಯುಎಇಯಲ್ಲಿ ಆಡಿತ್ತು.ಪಾಕ್ ವಿರುದ್ಧ ಲಾಹೋರ್‌ನಲ್ಲಿ ಟ್ವೆಂಟಿ-20 ಪಂದ್ಯವನ್ನು ಆಡಲು ತರಂಗ ಹಾಗೂ ಇತರ ಹಿರಿಯ ಆಟಗಾರರು ನಿರಾಕರಿಸಿದ್ದರು. ಆಗ ಪೆರೇರ ಶ್ರೀಲಂಕಾ ತಂಡದ ನಾಯಕತ್ವವನ್ನು ವಹಿಸಿದ್ದರು. ಮಾ.2009ರಲ್ಲಿ ಶ್ರೀಲಂಕಾ ತಂಡದ ಬಸ್ ಮೇಲೆ ಉಗ್ರರ ದಾಳಿ ನಡೆದ ಬಳಿಕ ಶ್ರೀಲಂಕಾ ತಂಡ ಪಾಕ್ ನೆಲದಲ್ಲಿ ಆಡಿದ ಮೊದಲ ಅಂತಾರಾಷ್ಟ್ರೀಯ ತಂಡ ಎನಿಸಿಕೊಂಡಿತ್ತು.

‘‘ಶ್ರೀಲಂಕಾದ ಏಕದಿನ ಹಾಗೂ ಟ್ವೆಂಟಿ-20 ತಂಡಕ್ಕೆ ನಾವು ತಿಸ್ಸಾರ ಪೆರೇರ ಅವರನ್ನು ನಾಯಕನ್ನಾಗಿ ಆಯ್ಕೆ ಮಾಡಿದ್ದೇವೆ’’ ಎಂದು ಶ್ರೀಲಂಕಾ ಕ್ರಿಕೆಟ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಡಿ.10 ರಿಂದ ಧರ್ಮಶಾಲಾದಲ್ಲಿ ಆರಂಭವಾಗಲಿದೆ. ಡಿ.13 ಹಾಗೂ 17 ರಂದು ಚಂಡೀಗಡ ಹಾಗೂ ವಿಶಾಖಪಟ್ಟಣದಲ್ಲಿ ಕ್ರಮವಾಗಿ ಎರಡನೇ ಹಾಗೂ ಮೂರನೇ ಏಕದಿನ ಪಂದ್ಯವನ್ನು ಆಡಲಿದೆ. ಟ್ವೆಂಟಿ-20 ಅಂತಾರಾಷ್ಟ್ರೀಯ ಸರಣಿಯು ಡಿ.20 ರಂದು ಕಟಕ್‌ನಲ್ಲಿ ಆರಂಭವಾಗಲಿದೆ. ಡಿ.22 ಹಾಗೂ 24 ರಂದು ಇಂದೋರ್ ಹಾಗೂ ಮುಂಬೈನಲ್ಲಿ ಎರಡನೇ ಹಾಗೂ ಮೂರನೇ ಟ್ವೆಂಟಿ-20 ಪಂದ್ಯ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News