ಬಿಸಿಸಿಐ ವಿರುದ್ಧ ಕಾನೂನು ಸಮರಕ್ಕೆ ಪಿಸಿಬಿ ಸಜ್ಜು

Update: 2017-11-30 17:50 GMT

ಕರಾಚಿ, ನ.30: ದ್ವಿಪಕ್ಷೀಯ ಕ್ರಿಕೆಟ್ ಸರಣಿಯ ಒಪ್ಪಂದಕ್ಕೆ ಗೌರವ ನೀಡದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ವಿರುದ್ಧ ಕಾನೂನು ಹೋರಾಟ ನಡೆಸಲು ಪಾಕಿಸ್ತಾನ ಸಜ್ಜಾಗಿದೆ ಎಂದು ಐಸಿಸಿ ಗುರುವಾರ ದೃಢಪಡಿಸಿದೆ.

ಉಭಯ ತಂಡಗಳ ನಡುವೆ ನಡೆದಿದ್ದ ಒಪ್ಪಂದದ ಪ್ರಕಾರ 2014 ಹಾಗೂ 2015ರಲ್ಲಿ ಎರಡು ಸರಣಿಗಳು ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಬಿಸಿಸಿಐಯಿಂದ 70 ಮಿಲಿಯನ್ ಡಾಲರ್ ಪರಿಹಾರಕ್ಕಾಗಿ ದಾವೆ ಹೂಡಿದೆ. ಒಪ್ಪಂದ ವಿವಾದಕ್ಕೆ ಸಂಬಂಧಿಸಿ ಪಿಸಿಬಿ ವಕೀಲರು ಕಳುಹಿಸಿರುವ ನೋಟಿಸ್‌ನ್ನು ಐಸಿಸಿ ಸ್ವೀಕರಿಸಿದೆ. ಮುಂದಿನ ವಾರ ನೋಟಿಸ್‌ನ್ನು ವಿವಾದ ಇತ್ಯರ್ಥ ಸಮಿತಿಗೆ ರವಾನಿಸಲಾಗುವುದು ಎಂದು ಐಸಿಸಿ ವಕ್ತಾರರು ತಿಳಿಸಿದ್ದಾರೆ. ಪಿಸಿಬಿ ಈ ವರ್ಷಾರಂಭದಲ್ಲಿ ಬಿಸಿಸಿಐಗೆ ಕಾನೂನು ನೋಟಿಸ್‌ನ್ನು ಜಾರಿಗೊಳಿಸಿತ್ತು. ಆದರೆ ಬಿಸಿಸಿಐ ಅಧಿಕಾರಿಗಳು ನೋಟಿಸನ್ನು ತಿರಸ್ಕರಿಸಿದ್ದರು. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕ್ ತಂಡಗಳು 2007 ರಿಂದ ಪೂರ್ಣಕಾಲಿಕ ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ. 2008ರಲ್ಲಿ ಮುಂಬೈನಲ್ಲಿ ಉಗ್ರರ ದಾಳಿ ನಡೆದ ಬಳಿಕ ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಕ್ರೀಡೆಗಳನ್ನು ಭಾರತ ಸ್ಥಗಿತಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News