ಭಾರತ-ಪಾಕ್ ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ರಾಜಕೀಯ ಗೊಳಿಸುತ್ತಿರುವುದೇಕೆ?: ಬೇಡಿ ಪ್ರಶ್ನೆ
ಹೊಸದಿಲ್ಲಿ, ನ.30: ಪಾಕಿಸ್ತಾನ ವಿರುದ್ಧದ ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ರಾಜಕೀಯಗೊಳಿಸಿ ರಾಷ್ಟ್ರಪ್ರೇಮದ ಅರ್ಥವನ್ನು ಯಾರೂ ಕೆಡಿಸಬಾರದು ಎಂದು ಭಾರತದ ಮಾಜಿ ನಾಯಕ ಬಿಷನ್ ಸಿಂಗ್ ಬೇಡಿ ಆಗ್ರಹಿಸಿದ್ದಾರೆ.
2012ರಲ್ಲಿ ಭಾರತದಲ್ಲಿ ಪಾಕ್ ವಿರುದ್ಧ ಸೀಮಿತ ಓವರ್ ಕ್ರಿಕೆಟ್ ಸರಣಿ ನಡೆದ ಬಳಿಕ ಭಾರತ ಸರಕಾರ ಭಾರತ-ಪಾಕ್ ದ್ವಿಪಕ್ಷೀಯ ಸರಣಿಗೆ ಹಸಿರು ನಿಶಾನೆ ತೋರಿಲ್ಲ. 2012ರ ಬಳಿಕ ಭಾರತ ತಂಡ ಪಾಕ್ ವಿರುದ್ಧ ಐಸಿಸಿ ಟೂರ್ನಿಗಳನ್ನು ಮಾತ್ರ ಆಡುತ್ತಿದೆ.
‘‘ಕ್ರಿಕೆಟ್‌ನ್ನು ರಾಜಕೀಯಗೊಳಿಸುವುದೇಕೆ? ಕ್ರಿಕೆಟ್ ಆಡದೇ ಇರುವ ಮೂಲಕ ಭಯೋತ್ಪಾದನೆಯನ್ನು ತೊಡೆದು ಹಾಕಲು ಸಾಧ್ಯವೇ? ಕ್ರಿಕೆಟ್ ಎಲ್ಲರನ್ನೂ ಒಂದಾಗಿಸಲು ಇರುವ ವೇದಿಕೆಯಾಗಿದೆ’’ ಎಂದು ಬೇಡಿ ಅಭಿಪ್ರಾಯಪಟ್ಟರು. ‘‘ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿ ಪಾಕಿಸ್ತಾನವನ್ನು ವಿರೋಧಿಸುವುದೇ ರಾಷ್ಟ್ರಪ್ರೇಮ ಎಂಬಂತಾಗಿದೆ. ಇದು ಸರಿಯಲ್ಲ. ಒಂದು ವೇಳೆ ನಾನು ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಸರಣಿ ಆಡಬೇಕೆಂದು ಹೇಳಿದಾಗ ನಾನು ಭಾರತದ ವಿರೋಧಿ ಆಗುವುದಿಲ್ಲ. ಇಂತಹ ಧೋರಣೆ ರಾಷ್ಟ್ರಪ್ರೇಮದ ಅರ್ಥವನ್ನು ಕೆಡಿಸುತ್ತದೆ’’ಎಂದು ಬೇಡಿ ಹೇಳಿದ್ದಾರೆ.
‘‘ಭಾರತದ ಕ್ರಿಕೆಟ್ ತಂಡ ಬಿಸಿಸಿಐ ಲಾಂಛನದ ಬದಲಿಗೆ ಭಾರತದ ರಾಷ್ಟ್ರಧ್ವಜವಿರುವ ಲಾಂಛನವನ್ನು ಧರಿಸಿ ಆಡಬೇಕು. ಆಟಗಾರರು ಭಾರತದ ಪರ ಆಡುತ್ತಾರೆಯೇ ಹೊರತು ಬಿಸಿಸಿಐ ಪರವಾಗಿ ಅಲ್ಲ. ನ್ಯೂಝಿಲೆಂಡ್, ಇಂಗ್ಲೆಂಡ್, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯ ಕ್ರಿಕೆಟ್ ತಂಡಗಳು ರಾಷ್ಟ್ರೀಯ ಲಾಂಛನವನ್ನು ಹೊಂದಿವೆ. ಬಿಸಿಸಿಐಯನ್ನು ಭಾರತೀಯ ಕ್ರಿಕೆಟ್ ಮಂಡಳಿ(ಐಸಿಬಿ) ಅಥವಾ ಕ್ರಿಕೆಟ್ ಇಂಡಿಯಾ ಎಂದು ಮರು ನಾಮಕರಣ ಮಾಡಬೇಕೆಂದು ಬೇಡಿ ಆಗ್ರಹಿಸಿದರು.