ಪಿಡಿಪಿ ಅಧ್ಯಕ್ಷೆಯಾಗಿ ಮೆಹಬೂಬಾ ಪುನರಾಯ್ಕೆ
Update: 2017-12-02 21:00 IST
ಜಮ್ಮು,ಡಿ.2: ಜಮ್ಮುಕಾಶ್ಮೀರದ ಆಡಳಿತಾರೂಢ ಪಿಡಿಪಿ ಪಕ್ಷದ ಅಧ್ಯಕ್ಷೆಯಾಗಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಶನಿವಾರ ಪುನರಾಯ್ಕೆಗೊಂಡಿದ್ದಾರೆ. ಪಕ್ಷಾಧ್ಯಕ್ಷೆಯಾಗಿ ಮೆಹಬೂಬಾ ಅವರು ಸತತ ಆರನೆ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಪಕ್ಷದ ನಾಯಕರು ತಿಳಿಸಿದ್ದಾರೆ.
ಅವಿರೋಧವಾಗಿ ಆಯ್ಕೆಯಾದ ಬಳಿಕ ಮೆಹಬೂಬಾ ಮುಫ್ತಿ ಮಾತನಾಡಿ, ತನ್ನ ಮೇಲೆ ಭರವಸೆಯಿರಿಸಿ, ಪಕ್ಷಾಧ್ಯಕ್ಷೆಯಾಗಿ ಆಯ್ಕೆ ಮಾಡಿರುವುದಕ್ಕಾಗಿ ಪಕ್ಷದ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ‘‘ಜಮ್ಮುಕಾಶ್ಮೀರದ ಅಭಿವೃದ್ಧಿ, ಎಲ್ಲರನ್ನೂ ಒಳಪಡಿಸಿಕೊಳ್ಳುವಿಕೆ ಹಾಗೂ ಸಮನ್ವಯತೆ ಕುರಿತ ನಮ್ಮ ಸಮಾನದೂರದೃಷ್ಟಿಯನ್ನು ಸಾಕಾರಗೊಳಿಸಲು ನಾವು ಅವಿಶ್ರಾಂತವಾಗಿ ಶ್ರಮಿಸಲಿದ್ದೇವೆ’’ ಎಂದು ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದಾರೆ.