ರಾಹುಲ್ ಪಟ್ಟಾಭಿಷೇಕವನ್ನು ಔರಂಗಝೇಬ್ ಪಟ್ಟಾಭಿಷೇಕಕ್ಕೆ ಸಮೀಕರಿಸಿದ ಮೋದಿ
ಅಹ್ಮದಾಬಾದ್, ಡಿ.4: ಕಾಂಗ್ರೆಸ್ ಪಕ್ಷದೊಳಗಿನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮೊಘಲರ ವಂಶಾಡಳಿತ ಕ್ರಮಕ್ಕೆ ಹೋಲಿಸಿದ ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಕೌಟುಂಬಿಕ ಆಡಳಿತ ಹೊಂದಿರುವ ಪಕ್ಷವೆಂದು ಈಗ ಕಾಂಗ್ರೆಸ್ ಮುಖಂಡರೇ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.
ಧರಮ್‌ಪುರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಹಿರಿಯ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಈ ಹಿಂದೆ ನನ್ನ ವಿರುದ್ಧ ಬಹಳಷ್ಟು ಹೇಳಿಕೆ ನೀಡಿದ್ದರು. ಈಗ ಅವರು - ಶಹಜಹಾನ್ ಜಹಾಂಗೀರ್‌ನ ಸ್ಥಾನಕ್ಕೆ ಆಯ್ಕೆಯಾದಾಗ ಅಥವಾ ಔರಂಗಝೇಬ್ ಶಹಜಹಾನ್‌ನ ಸ್ಥಾನಕ್ಕೆ ಆಯ್ಕೆಯಾದಾಗ ಚುನಾವಣೆ ನಡೆದಿತ್ತೇ. ಸಿಂಹಾಸನಕ್ಕೆ ಮಗನೇ ಉತ್ತರಾಧಿಕಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ - ಎಂಬ ಹೇಳಿಕೆಯನ್ನು ನೀಡಿದ್ದಾರೆ. ಅಂದರೆ ವಂಶಪಾರಂಪರ್ಯ ಆಡಳಿತವನ್ನು ಕಾಂಗ್ರೆಸ್ ಮುಖಂಡರೇ ಒಪ್ಪಿಕೊಂಡಂತಾಯಿತು . ಔರಂಗಝೇಬ್ ಆಡಳಿತಶೈಲಿಯನ್ನು ಒಪ್ಪಿಕೊಂಡಿರುವ ಕಾಂಗ್ರೆಸ್‌ಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಮೋದಿ ಹೇಳಿದರು. ಕಾಂಗ್ರೆಸ್ ವಿನಾಶದಂಚಿಗೆ ಸಾಗುತ್ತಿದೆ ಎಂದ ಮೋದಿ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಹಾಗೂ ಇದೀಗ ಜಾಮೀನು ಪಡೆದಿರುವ ವ್ಯಕ್ತಿ ಪಕ್ಷದ ಅಧ್ಯಕ್ಷರಾಗಲು ಹೊರಟಿರುವುದು ಕಾಂಗ್ರೆಸ್‌ನ ಸಂಸ್ಕೃತಿಯನ್ನು ತೋರಿಸುತ್ತಿದೆ ಎಂದು ಟೀಕಿಸಿದರು.
ರಾಹುಲ್ ಸತತವಾಗಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವುದನ್ನು ಉಲ್ಲೇಖಿಸಿದ ಮೋದಿ, ಒಂದು ಕಾಲದಲ್ಲಿ ಕೆಲವರು ತಮ್ಮ ‘ಜಾತ್ಯಾತೀತ’ತೆಯನ್ನು ರುಜುವಾತು ಪಡಿಸಲು ಸ್ಪರ್ಧೆ ನಡೆಸುತ್ತಿದ್ದರು ಎಂದು ಟಾಂಗ್ ನೀಡಿದರು. ಕಾಂಗ್ರೆಸ್‌ನವರು ಕಳೆದ ಹಲವು ವರ್ಷಗಳಿಂದ ಬಿಜೆಪಿ ಮುಸ್ಲಿಂ ವಿರೋಧಿ ಎಂದು ಆರೋಪಿಸುತ್ತಾ ಬಂದರು. ಆದರೆ ಈ ಬಾರಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಒಮ್ಮೆಯೂ ಈ ಆರೋಪವನ್ನು ಮಾಡಿಲ್ಲ. ಅಂದರೆ ತಾವು ಮುಸ್ಲಿಂ ಓಟುಗಳ ಧ್ರುವೀಕರಣಕ್ಕಾಗಿ ಈ ರೀತಿ ಮಾಡುತ್ತಿದ್ದೆವು ಎಂದು ಕಾಂಗ್ರೆಸ್‌ನವರೇ ಒಪ್ಪಿಕೊಂಡಂತಾಗಿದೆ. ಈಗ ಮುಸ್ಲಿಮರಿಗೂ ಕಾಂಗ್ರೆಸ್‌ನ ನಿಜಬಣ್ಣ ತಿಳಿದಿದೆ ಎಂದು ಮೋದಿ ಹೇಳಿದರು.