×
Ad

ಮೋಹನ್ ಭಾಗವತ್ ಭಾರತದ ಮುಖ್ಯ ನ್ಯಾಯಾಧೀಶರೇ?: ಉವೈಸಿ ಪ್ರಶ್ನೆ

Update: 2017-12-04 20:01 IST

ಹೊಸದಿಲ್ಲಿ, ಡಿ.4: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ತಮ್ಮನ್ನು ಭಾರತದ ಮುಖ್ಯ ನ್ಯಾಯಾಧೀಶರೆಂದು ತಿಳಿದುಕೊಂಡಿದ್ದಾರೆಯೇ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಉವೈಸಿ ಪ್ರಶ್ನಿಸಿದ್ದಾರೆ.

ಅಯೋಧ್ಯೆಯ ವಿವಾದಿತ ಭೂಮಿಗೆ ಸಂಬಂಧಪಟ್ಟಂತೆ ಭಾಗವತ್ ಎರಡು ವಾರಗಳ ಹಿಂದೆ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಉವೈಸಿ ಈ ರೀತಿ ಅನುಮಾನ ವ್ಯಕ್ತಪಡಿಸಿದ್ದಾರೆ. ಮೋಹನ್ ಭಾಗವತ್ ಯಾರು? ಅವರು ಭಾರತದ ಮುಖ್ಯ ನ್ಯಾಯಾಧೀಶರೇ? ಎಂದು ಉವೈಸಿ ಪ್ರಶ್ನಿಸಿದ್ದಾರೆ.

ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಪಟ್ಟಂತೆ ವಿಚಾರಣೆಯು ಸರ್ವೋಚ್ಛ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ಮಧ್ಯೆ ಭಾಗವತ್ ವಿವಾದಿತ ಸ್ಥಳದಲ್ಲೇ ರಾಮ ಮಂದಿರವನ್ನು ಕಟ್ಟುವೆವು ಎಂಬ ಹೇಳಿಕೆ ನೀಡಿದ್ದರು. ಪ್ರಕರಣವು ನ್ಯಾಯಾಲಯದಲ್ಲಿರುವಾಗ ಭಾಗವತ್ ಯಾವ ನೆಲೆಯಲ್ಲಿ ಮಂದಿರವನ್ನು ಅಲ್ಲೇ ಕಟ್ಟುವೆವು ಎಂದು ಹೇಳಿಕೆ ನೀಡಲು ಸಾಧ್ಯ ಎಂದು ಉವೈಸಿ ಪ್ರಶ್ನಿಸಿದ್ದಾರೆ.

ಕಳೆದ ತಿಂಗಳು ಬಿಜೆಪಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ ಕೂಡಾ ಮುಂದಿನ ದೀಪಾವಳಿಯಿಂದ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ ಎಂಬ ಆಶಾವಾದವನ್ನು ವ್ಯಕ್ತಪಡಿಸಿದ್ದರು. ಅಯೋಧ್ಯೆ ಪ್ರಕರಣದ ಸುದೀರ್ಘ ವಿಚಾರಣಾ ಪ್ರಕ್ರಿಯೆಯಿಂದ ಮಂದಿರದಲ್ಲಿ ಪೂಜೆ ಸಲ್ಲಿಸುವ ತಮ್ಮ ಹಕ್ಕಿಗೆ ಚ್ಯುತಿಯಾಗಿದೆ ಎಂದು ಆರೋಪಿಸಿರುವ ಸುಬ್ರಹ್ಮಣ್ಯನ್ ಸ್ವಾಮಿ ಅಲಹಾಬಾದ್ ನ್ಯಾಯಾಲಯದ ತೀರ್ಪಿನ ವಿರುದ್ಧ ಸರ್ವೋಚ್ಛ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಮೇಲ್ಮನವಿಯ ಮಧ್ಯಸ್ಥರಾಗಿದ್ದಾರೆ.

ವಿವಾದಿತ 2.77 ಎಕರೆ ಪ್ರದೇಶವನ್ನು ಮುಸ್ಲಿಮರು, ಹಿಂದೂಗಳು ಮತ್ತು ನಿರ್ಮೋಹಿ ಅಖಾಡ (ಹಿಂದೂ ಬಣ) ದ ಮಧ್ಯೆ ಸಮಾನವಾಗಿ ಹಂಚಬೇಕು ಎಂದು ಅಕ್ಟೋಬರ್ 2010ರ ತನ್ನ ತೀರ್ಪಿನಲ್ಲಿ ಅಲಹಾಬಾದ್ ಹೈಕೋರ್ಟ್ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News