‘ರಾಹುಲ್ ಫೋಬಿಯಾ’ ದಿಂದ ನರಳುತ್ತಿರುವ ಪ್ರಧಾನಿ ಮೋದಿ: ಕಾಂಗ್ರೆಸ್

Update: 2017-12-04 15:06 GMT

 ಹೊಸದಿಲ್ಲಿ, ಡಿ.4: ಪ್ರಧಾನಿ ಮೋದಿ ರಾಹುಲ್ ಗಾಂಧಿ ಫೋಬಿಯಾದಿಂದ ನರಳುತ್ತಿದ್ದಾರೆ ಎಂದು ಟೀಕಿಸಿರುವ ಕಾಂಗ್ರೆಸ್, ಮೋದಿ ತಮ್ಮ ಪಕ್ಷದ ಹಿರಿಯ ಸದಸ್ಯರಾದ ಯಶವಂತ್ ಸಿನ್ಹ , ಶತ್ರುಘ್ನ ಸಿನ್ಹ, ಅರುಣ್ ಶೌರಿ ಮುಂತಾದವರು ಮುಂದಿಟ್ಟಿರುವ ಪ್ರಶ್ನೆಗಳ ಬಗ್ಗೆ ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದೆ.

ಮೋದಿ ರಾಹುಲ್ ಫೋಬಿಯಾದಿಂದ ನರಳುತ್ತಿರುವುದೇಕೆ. ಅವರೇಕೆ ಅಷ್ಟೊಂದು ಆತಂಕಕ್ಕೊಳಗಾಗಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಪ್ರಶ್ನಿಸಿದರು. ಪಕ್ಷಾಧ್ಯಕ್ಷತೆಗೆ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ಸುರ್ಜೆವಾಲಾ ಸುದ್ದಿಗಾರರ ಜೊತೆ ಮಾತನಾಡಿದರು. ಮೋದಿಯವರಿಗೆ ಶೆಹ್‌ಝಾದ್(ಪೂನಾವಾಲಾ), ಶಹಝಾದಾ(ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪುತ್ರ ಜೈ ಶಾ) ಹಾಗೂ ಶೌರ್ಯ (ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪುತ್ರ)ರ ಬಗ್ಗೆ ಇರುವ ಪ್ರೀತಿ ಇಡೀ ವಿಶ್ವಕ್ಕೇ ತಿಳಿದಿರುವ ವಿಷಯವಾಗಿದೆ ಎಂದು ಸುರ್ಜೆವಾಲಾ ಹೇಳಿದರು.

 ಬಿಜೆಪಿಯ ಉನ್ನತಿಯಲ್ಲಿ ತಮ್ಮದೇ ಕೊಡುಗೆ ನೀಡಿರುವ ಹಿರಿಯರಾದ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಕೇಶುಭಾ ಪಟೇಲ್, ಕಾಶಿರಾಂ ರಾಣಾ, ಹಿರೇನ್ ಪಾಂಡ್ಯ ಮುಂತಾದವರ ವಿರುದ್ಧ ಮಾಡಿರುವ ಒಳಸಂಚಿನ ಕುರಿತೂ ಮೋದಿ ಮತ್ತು ಅಮಿತ್ ಶಾ ಬಾಯಿ ಬಿಡಬೇಕು ಎಂದು ಅವರು ಆಗ್ರಹಿಸಿದರು. ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆಯೇ ಎಂದು ಕಾಂಗ್ರೆಸ್‌ನ ಮತ್ತೋರ್ವ ಮುಖಂಡ ಕಮಲನಾಥ್ ಪ್ರಶ್ನಿಸಿದ್ದಾರೆ. ನಿತಿನ್ ಗಡ್ಕರಿಯವರನ್ನು ಮತದಾನ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗಿತ್ತೇ ಎಂಬುದಕ್ಕೆ ಮೊದಲು ಅವರು ಉತ್ತರಿಸಬೇಕು ಎಂದು ಕಮಲನಾಥ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News