ನಾಪತ್ತೆಯಾಗಿರುವ ಮೀನುಗಾರರ ನಿಖರ ಮಾಹಿತಿಗೆ ಆಗ್ರಹ

Update: 2017-12-09 13:30 GMT

ತಿರುವನಂತಪುರಂ, ಡಿ.9: ಕೇರಳದಲ್ಲಿ ಒಖಿ ಚಂಡಮಾರುತದ ಕಾರಣದಿಂದ ನಾಪತ್ತೆಯಾಗಿರುವ ಮೀನುಗಾರರ ಬಗ್ಗೆ ಸರಕಾರ ನೀಡುತ್ತಿರುವ ಅಂಕಿಅಂಶ ಸರಿಯಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಚಂಡಮಾರುತದ ಹೊಡೆತಕ್ಕೆ ಕೇರಳದಲ್ಲಿ ಸತ್ತವರ ಸಂಖ್ಯೆ 38 ಮತ್ತು ಇವರಲ್ಲಿ ಹೆಚ್ಚಿನವರು ಮೀನುಗಾರರು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸಣ್ಣ ದೋಣಿಗಳಲ್ಲಿ ಮೀನುಗಾರಿಕೆ ನಡೆಸುವ 96 ಮೀನುಗಾರರು ಹಾಗೂ ದೊಡ್ಡ ಬೋಟ್‌ಗಳಲ್ಲಿ ಮೀನುಗಾರಿಕೆ ನಡೆಸುವ ಸುಮಾರು 200 ಮೀನುಗಾರರು ನಾಪತ್ತೆಯಾಗಿದ್ದಾರೆ. ಆದರೆ ಸ್ಥಳೀಯರ ಪ್ರಕಾರ ನಾಪತ್ತೆಯಾಗಿರುವ ಮೀನುಗಾರರ ಸಂಖ್ಯೆ ಇನ್ನೂ ಹೆಚ್ಚಾಗಿದೆ.

ಚಂಡಮಾರುತದ ಹಾವಳಿಗೆ ನಲುಗಿರುವ ಕೆಲವು ಸಂತ್ರಸ್ತರು ಇನ್ನೂ ಸ್ಥಳೀಯ ಚರ್ಚ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿರುವ ಪರಿಹಾರ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ. ಇವರಲ್ಲಿ ವಿಳಿಂಜಮ್ ಗ್ರಾಮದ 25ರ ಹರೆಯದ ಶಿಮ್ಮಿ ಫ್ರೆಡ್ಡಿ ಎಂಬಾಕೆಯ ಪತಿ ನ.29ರಂದು ಮೀನುಗಾರಿಕೆಗೆ ತೆರಳಿದ್ದವರು ಆ ಬಳಿಕ ಎಲ್ಲಿದ್ದಾರೆ ಎಂಬ ಮಾಹಿತಿ ದೊರಕಿಲ್ಲ. ಪತಿಯ ದೈನಂದಿನ ದುಡಿಮೆಯೇ ಸಂಸಾರ ಸಾಗಿಸಲು ಆಧಾರವಾಗಿದ್ದು ಇದೀಗ ಪತಿ ಸುರಕ್ಷಿತವಾಗಿ ಮರಳಲಿ ಎಂದು ತಮ್ಮ ಪುತ್ರಿಯೊಂದಿಗೆ ದೇವರಿಗೆ ಮೊರೆಯಿಡುತ್ತಿದ್ದಾರೆ. ಇದೇ ಗ್ರಾಮದವರಾದ 73ರ ಹರೆಯದ ವಲ್ಸಮ್ಮ ಎಂಬವರ ಪತಿಯೂ ಮೀನುಗಾರಿಕೆಗೆಂದು ತೆರಳಿದ್ದವರು ಕಳೆದ 9 ದಿನದಿಂದ ಪತ್ತೆಯಾಗಿಲ್ಲ.

ಚಂಡಮಾರುತದಿಂದ ಉಂಟಾದ ನಾಶನಷ್ಟ ಹಾಗೂ ಕೈಗೊಂಡಿರುವ ಪರಿಹಾರ ಕಾರ್ಯಾಚರಣೆಯ ಅವಲೋಕನ ನಡೆಸಲು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಸರ್ವಪಕ್ಷ ಸಭೆ ಕರೆದಿದ್ದರು. ಸಭೆಯಲ್ಲಿ ಪಾಲ್ಗೊಂಡ ತಿರುವನಂತಪುರಂ ಕ್ಷೇತ್ರದ ಕಾಂಗ್ರೆಸ್ ಸಂಸದ ಶಶಿ ತರೂರ್, ಸರಕಾರ ತನ್ನ ಹೊಣೆಗಾರಿಕೆಯನ್ನು ಸೂಕ್ತವಾಗಿ ನಿರ್ವಹಿಸಿಲ್ಲ ಎಂದು ಟೀಕಿಸಿದರು. ಚಂಡಮಾರುತದ ಬಗ್ಗೆ ಮೊದಲೇ ಮುನ್ನೆಚ್ಚರಿಕೆ ನೀಡಲಾಗಿದೆ. ತಮಿಳುನಾಡು ಮತ್ತು ಲಕ್ಷದ್ವೀಪದಲ್ಲಿ ಯಾವುದೇ ದುರ್ಘಟನೆ ಸಂಭವಿಸಿಲ್ಲ. ಆದರೆ ಕೇರಳ ಸರಕಾರ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ವಿಫಲವಾದ ಕಾರಣ ಈಗಾಗಲೇ 38 ಮಂದಿ ಮೃತಪಟ್ಟಿದ್ದಾರೆ. ನೂರಾರು ಮಂದಿ ನಾಪತ್ತೆಯಾಗಿದ್ದು ಇವರು ಮರಳಿ ಬರುವ ಸಾಧ್ಯತೆ ಕ್ಷೀಣವಾಗಿದೆ ಎಂದು ದೂರಿದರು.

ತರೂರ್ ಆರೋಪವನ್ನು ತಳ್ಳಿ ಹಾಕಿದ ಕೇರಳದ ಮೀನುಗಾರಿಕಾ ಸಚಿವೆ ಜೆ.ಮರ್ಸಿಕುಟ್ಟಿ ಅಮ್ಮ, ಏನೆಲ್ಲಾ ಸಾಧ್ಯವೋ ಅದನ್ನು ಸರಕಾರ ಮಾಡಿದೆ. ಸ್ಥಳೀಯರ ಅಸಮಾಧಾನದ ರಾಜಕೀಯ ಲಾಭ ಪಡೆಯಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ. ಇಸ್ರೋ ಜತೆ ಸರಕಾರ ನಿಕಟ ಸಂಪರ್ಕದಲ್ಲಿದ್ದು ಉಪಗ್ರಹ ಆಧಾರಿತ ಸಂಪರ್ಕ ವ್ಯವಸ್ಥೆಯ ಮೂಲಕ ಸರ್ವಸಹಕಾರ ನೀಡುವ ಭರವಸೆಯನ್ನು ಅವರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News