ತಾಯಿ, ಸಹೋದರಿಯನ್ನು ಕೊಂದು ಪರಾರಿಯಾಗಿದ್ದ ಬಾಲಕ ಪತ್ತೆ

Update: 2017-12-09 13:39 GMT

ಗ್ರೇಟರ್ ನೊಯ್ಡ,ಡಿ.9: ಸೋಮವಾರ ರಾತ್ರಿ ಇಲ್ಲಿಯ ಅಪಾರ್ಟ್‌ಮೆಂಟ್ ವೊಂದರಲ್ಲಿ ತನ್ನ ತಾಯಿ ಮತ್ತು ಸಹೋದರಿಯನ್ನು ಕೊಲೆ ಮಾಡಿದ ಬಳಿಕ ಕಾಣೆಯಾಗಿದ್ದ ಶಂಕಿತ ಆರೋಪಿ, 16ರ ಹರೆಯದ ಬಾಲಕನನ್ನು ವಾರಣಾಸಿಯಲ್ಲಿ ಪೊಲೀಸರು ಬಂಧಿಸಿ ಶುಕ್ರವಾರ ತಡರಾತ್ರಿ ಇಲ್ಲಿಗೆ ಕರೆತಂದಿದ್ದಾರೆ. ತನ್ನ ತಾಯಿ ತನ್ನನ್ನು ಬೈದು ದಂಡಿಸಿದ್ದಳು, ಹೆತ್ತವರು ಪ್ರೀತಿಸುತ್ತಿಲ್ಲ ಎಂಬ ಭಾವನೆ ತನ್ನಲ್ಲಿತ್ತು. ಹೀಗಾಗಿ ಕೊಲೆಗಳನ್ನು ಮಾಡಿದ್ದೇನೆ ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಂಜಲಿ ಅಗರವಾಲ್(42) ಮತ್ತು ಆಕೆಯ ಪುತ್ರಿ ಕನಿಕಾ(12) ಅವರನ್ನು ಚೂರಿಯಿಂದ ಇರಿದು ಕೊಲ್ಲಲಾಗಿತ್ತು. ಘಟನೆಯ ಬಳಿಕ ಪುತ್ರ ನಾಪತ್ತೆಯಾಗಿದ್ದ.

ಸೋಮವಾರ ಮಧ್ಯಾಹ್ನ ಮನೆಯಲ್ಲಿ ಅಭ್ಯಾಸ ಮಾಡಲು ಸೋಫಾ ಬಳಸಿದ್ದಕ್ಕಾಗಿ ಅಂಜಲಿ ಮಗನನ್ನು ಬೈದು, ಥಳಿಸಿದ್ದರು. ಕಲಿಕೆಯಲ್ಲಿ ಹಿಂದೆ ಬಿದ್ದಿದ್ದಕ್ಕಾಗಿ ಆತನ ಸೆಲ್ ಫೋನ್‌ನ್ನು ತಂದೆ ಕಸಿದುಕೊಂಡಿದ್ದರು. ಈ ಎಲ್ಲ ಘಟನೆಗಳಿಂದ ಕುಪಿತಗೊಂಡಿದ್ದ ಬಾಲಕ ಸೋಮವಾರ ರಾತ್ರಿ ಅಂಜಲಿ ಮತ್ತು ಕನಿಕಾ ನಿದ್ರಿಸಿದ್ದಾಗ ಅವರನ್ನು ಕೊಲೆ ಮಾಡಿದ್ದ.

ಕೊಲೆಯ ಬಳಿಕ ಟ್ಯಾಕ್ಸಿಯಲ್ಲಿ ಹಳೆಯ ದಿಲ್ಲಿ ರೈಲು ನಿಲ್ದಾಣಕ್ಕೆ ತೆರಳಿದ್ದ ಬಾಲಕ ಅಲ್ಲಿ ಜಮ್ಮುವಿಗೆ ಪ್ರಯಾಣಿಸುತ್ತಿದ್ದ ರೈಲನ್ನು ಹತ್ತಿದ್ದ. ಲುಧಿಯಾನಾದಲ್ಲಿ ಇಳಿದು ಚಂಡಿಗಡ, ಶಿಮ್ಲಾ ಮತ್ತು ರಾಂಚಿಗೆ ಪ್ರಯಾಣಿಸಿ ಅಂತಿಮವಾಗಿ ವಾರಣಾಸಿಯನ್ನು ತಲುಪಿದ್ದ. ದಾರಿಹೋಕರಿಂದ ಮೊಬೈಲ್ ಫೋನ್ ಪಡೆದುಕೊಂಡು ತಂದೆಗೆ ಕರೆ ಮಾಡಿ ಅಳತೊಡಗಿದ್ದ ಎಂದು ಪೊಲೀಸರು ತಿಳಿಸಿದರು. ಈ ಕರೆಯ ಆಧಾರದಲ್ಲಿ ಪೊಲೀಸರು ಆತನನ್ನು ಪತ್ತೆ ಮಾಡಿದ್ದರು.

ಜೋಡಿ ಕೊಲೆಗಳು ನಡೆದ ದಿನ ರಾತ್ರಿ ಬಾಲಕನ ತಂದೆ ಕಾರ್ಯನಿಮಿತ್ತ ಸೂರತ್‌ಗೆ ತೆರಳಿದ್ದು, ಅಜ್ಜ-ಅಜ್ಜಿ ಮದುವೆಯೊಂದರಲ್ಲಿ ಭಾಗಿಯಾಗಲು ಡೆಹ್ರಾಡೂನ್‌ನಲ್ಲಿದ್ದರು.

ಎಷ್ಟೇ ಕರೆಗಳನ್ನು ಮಾಡಿದರೂ ಅಂಜಲಿ ಸ್ವೀಕರಿಸದಿದ್ದಾಗ ಆತಂಕಗೊಂಡ ಪತಿ ಸೋದರ ಸಂಬಂಧಿಗೆ ಮಾಹಿತಿ ನೀಡಿದ್ದರು. ಮಂಗಳವಾರ ರಾತ್ರಿ ಪೊಲೀಸರು ಆಗಮಿಸಿ ಅಪಾರ್ಟ್‌ಮೆಂಟ್‌ನ ಬಾಗಿಲು ಒಡೆದಾಗ ಜೋಡಿ ಕೊಲೆಗಳು ಬೆಳಕಿಗೆ ಬಂದಿದ್ದವು.

ಬಾಲಕ ಈ ಕೊಲೆಗಳನ್ನು ಮಾಡಲು ಕ್ರಿಕೆಟ್ ಬ್ಯಾಟ್, ಕತ್ತರಿ ಮತ್ತು ಪಿಝ್ಝಾ ಕಟರ್ ಬಳಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News