ಕೇಂದ್ರ ಸರಕಾರ ‘ಜನಮರುಳು’ ಬಜೆಟ್ ಮಂಡಿಸದು: ರಥಿನ್ ರಾಯ್

Update: 2017-12-10 13:51 GMT

ಹೊಸದಿಲ್ಲಿ, ಡಿ.10: ಮುಂಬರುವ ಬಜೆಟ್ ಜನರನ್ನು ಓಲೈಸುವ ಉದ್ದೇಶದ ‘ಜನಮರುಳು’ ಬಜೆಟ್ ಆಗಿರದು ಎಂದು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಸದಸ್ಯ ರಥಿನ್ ರಾಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಕೇಂದ್ರ ಸರಕಾರ ಫೆ.1ರಂದು ಮತ್ತೊಂದು ಶ್ರೇಷ್ಟ ಬಜೆಟ್ ಬಜೆಟ್ ಮಂಡಿಸುವ ನಿರೀಕ್ಷೆಯಿದ್ದು , ವೆಚ್ಚದ ಗುಣಮಟ್ಟ ಸುಧಾರಿಸುವ ಸರಕಾರದ ಬದ್ಧತೆಯನ್ನು ಇದು ಪ್ರತಿಬಿಂಬಿಸಲಿದೆ . ಯಾವುದೇ ಜನಮರಳು ಅಥವಾ ಜನಪ್ರಿಯ ಘೋಷಣೆ ಇರದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ಸರಕಾರ ಹೊಣೆಗಾರಿಕೆಯ ಬಜೆಟ್ ಮಂಡಿಸಲಿದೆ ಎಂದು ನನ್ನ ಭಾವನೆ. ಜನರನ್ನು ಸಂತುಷ್ಟಿಪಡಿಸಲು ಸರಕಾರ ಬಜೆಟನ್ನು ಬಳಸಿಕೊಳ್ಳದು. ವೆಚ್ಚದ ಗುಣಮಟ್ಟ ಸುಧಾರಿಸುವ ಬದ್ಧತೆಯನ್ನು ಬಜೆಟ್ ಪ್ರತಿಫಲಿಸಲಿದೆ ಎಂದು ರಾಯ್ ಹೇಳಿದರು. ಮುಂದಿನ ಒಂದೂವರೆ ವರ್ಷಗಳಲ್ಲಿ ಕೇಂದ್ರ ಸರಕಾರದ ಸುಧಾರಣಾ ಕಾರ್ಯಸೂಚಿ ಏನಿರಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಮೂರು ವರ್ಷಗಳಲ್ಲಿ ಕೈಗೊಂಡಿರುವ ಸುಧಾರಣಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವತ್ತ ಸರಕಾರ ಗಮನ ಹರಿಸಬೇಕಿದೆ ಎಂದರು.

 ಹಲವಾರು ಶ್ರೇಷ್ಟ ಸುಧಾರಣಾ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಅವು ಪೂರ್ಣಗೊಳ್ಳಲು ಸಮಯ ಹಿಡಿಯುತ್ತದೆ. ಆದ್ದರಿಂದ ಮತ್ತಷ್ಟು ಸುಧಾರಣಾ ಕಾರ್ಯಸೂಚಿಯ ಬದಲು, ಈಗಾಗಲೇ ಚಾಲನೆ ನೀಡಿರುವ ಸುಧಾರಣಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದಕ್ಕೆ ಸರಕಾರ ಆದ್ಯತೆ ನೀಡಲಿದೆ ಎಂದು ತಿಳಿಸಿದರು. ಆರ್‌ಬಿಐ ರೆಪೊ ದರವನ್ನು ಯಥಾಪ್ರಕಾರ ಉಳಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಆರ್ಥಿಕ ಕಾರ್ಯಸೂಚಿ ಸಮಿತಿಯ ನಿರ್ಧಾರವಾಗಿದೆ. ಬಡ್ಡಿದರ ಮತ್ತಷ್ಟು ಕಡಿತಗೊಳ್ಳುವುದು ಉತ್ತಮವೇ ಆಗಿದ್ದರೂ, ಉಳಿತಾಯದ ಬಗ್ಗೆಯೂ ನಾವು ಗಮನಹರಿಸಬೇಕಿದೆ ಎಂದು ಆರ್ಥಿಕ ಸಲಹಾ ಮಂಡಳಿ ಎನ್‌ಐಪಿಎಫ್‌ಪಿಯ ನಿರ್ದೇಶಕರೂ ಆಗಿರುವ ರಾಯ್ ತಿಳಿಸಿದ್ದಾರೆ. ಶೇ.8ರಷ್ಟು ಅಭಿವೃದ್ಧಿ ದರವನ್ನು ಸಾಧಿಸಬೇಕಾದರೆ ಭಾರತವು ಸುಧಾರಣಾ ಪ್ರಕ್ರಿಯೆಯಲ್ಲಿ ಇನ್ನೂ ಬಹಳಷ್ಟು ದೂರ ಸಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸುಮಾರು ಶೇ.7ರಷ್ಟು ಅಭಿವೃದ್ಧಿ ದರವನ್ನು ಸಾಧಿಸಿದ್ದು ಹಣದುಬ್ಬರ ಕಡಿಮೆಯಾಗಿದೆ. ಸಿಎಡಿ(ಕರೆಂಟ್ ಅಕೌಂಟ್ ಡಿಪಾಸಿಟ್) ಕೂಡಾ ಶೇ.6.3ಕ್ಕೂ ಕಡಿಮೆಯಿದ್ದು ನಿಯಂತ್ರಣದಲ್ಲಿದೆ. ವಿನಿಮಯ ದರ ಕಾರ್ಯನೀತಿ, ಆರ್ಥಿಕ ಕಾರ್ಯನೀತಿ, ಅಭಿವೃದ್ಧಿ ದರ ಎಲ್ಲವೂ ಉತ್ತಮ ರೀತಿಯಲ್ಲಿದೆ ಎಂದ ಅವರು, ಮುಂದಿನ ಹತ್ತು ವರ್ಷಗಳಲ್ಲಿ ಭಾರತವು ತನ್ನ ಬೇಡಿಕೆಯನ್ನು ಸ್ವಯಂ ಪೂರೈಸುವಷ್ಟರ ಮಟ್ಟಿಗೆ ಅಭಿವೃದ್ಧಿ ಸಾಧಿಸುವಂತಾಗಬೇಕು. ಇದುವೇ ಸರಕಾರ ಕಾರ್ಯಸೂಚಿ ಆಗಿರಲಿದೆ ಎಂದರು.

ಉದ್ಯೋಗ ಸಮಸ್ಯೆಯ ಬಗ್ಗೆ ವಿವರಿಸಿದ ರಾಯ್, ಕೇವಲ ಉದ್ಯೋಗಕ್ಕೆ ಮಾತ್ರ ಗಮನ ನೀಡುವುದರಿಂದ ಈ ಸಮಸ್ಯೆ ಬಗೆಹರಿಸಲಾಗದು. ಉದ್ಯೋಗಿಗಳನ್ನು, ಅಂದರೆ ಉತ್ಪಾದನಾ ಕ್ಷೇತ್ರದಲ್ಲಿರುವವರನ್ನು ಒಳಗೊಂಡು ಒಂದು ಕಾರ್ಯನೀತಿ ರೂಪಿಸಬೇಕು ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News