ನಾಪತ್ತೆಯಾದ ಮೀನುಗಾರರ ಶೋಧಕಾರ್ಯ ಮುಂದುವರಿಕೆ: ಕೊಚ್ಚಿ ತೀರಕ್ಕೆ ಮರಳಿದ 67 ಮಂದಿ

Update: 2017-12-10 13:54 GMT

 ಕೊಚ್ಚಿ, ಡಿ.10: ಒಖಿ ಚಂಡಮಾರುತದ ಅಬ್ಬರಕ್ಕೆ ಸಮುದ್ರದಲ್ಲಿ ನಾಪತ್ತೆಯಾಗಿರುವ ಮೀನುಗಾರರ ಶೋಧಕಾರ್ಯ ಹತ್ತನೇ ದಿನವೂ ಮುಂದುವರಿದಿದ್ದು, ರವಿವಾರದಂದು 67 ಮೀನುಗಾರರನ್ನು ಕೊಚ್ಚಿ ತೀರಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ.

ಭಾರತೀಯ ವಾಯುಸೇನೆಗೆ ಸೇರಿದ ಎಎನ್-32 ವಿಮಾನವು ಕನ್ಯಾಕುಮಾರಿಯ ದಕ್ಷಿಣಕ್ಕೆ 10,880 ನಾಟಿಕಲ್ ಮೈಲ್ ದೂರದವರೆಗೆ ಹುಡುಕಾಟ ನಡೆಸಿ ಮೀನುಗಾರರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಇದೇ ವೇಳೆ ನಾಪತ್ತೆಯಾದ ಬಹುತೇಕ ಮೀನುಗಾರರಿಗೆ ಸಂಬಂಧಪಟ್ಟ ತಿರುವನಂತಪುರಂನ ಲ್ಯಾಟಿನ್ ಕ್ಯಾಥೊಲಿಕ್ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆಯನ್ನು ನಡೆಸಲಾಯಿತು ಮತ್ತು ಚಂಡಮಾರುತದಿಂದ ಭಾದಿತ ಪ್ರದೇಶಗಳಿಗೆ ಆಗಮಿಸಿ ಪರಿಶೀಲಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಲಾಯಿತು.

ಒಖಿ ಚಂಡಮಾರುತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಹಾಗೂ ಕೇಂದ್ರ ಸರಕಾರವು ಸಂತ್ರಸ್ತರ ಪುನರ್ವಸತಿಗಾಗಿ ಹೆಚ್ಚಿನ ನಿಧಿಯನ್ನು ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿತ್ತು.

ಸಮುದಾಯದ ಸದಸ್ಯರು ಸೋಮವಾರದಂದು ತಮ್ಮ ಬೇಡಿಕೆಯನ್ನು ಮುಂದಿಟ್ಟು ರಾಜಭವನದತ್ತ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಸುಮಾರು 300 ಮೀನುಗಾರರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಚರ್ಚ್ ಮೂಲಗಳು ತಿಳಿಸಿವೆ.

ಇದೇ ವೇಳೆ ತಮಿಳುನಾಡಿನ 49 ಮೀನುಗಾರರು, ಕೇರಳದ 13, ಅಸ್ಸಾಂನ ನಾಲ್ಕು ಮತ್ತು ಆಂಧ್ರಪ್ರದೇಶದ ಒಂದು ಹೀಗೆ ಒಟ್ಟಾರೆ 67 ಮೀನುಗಾರರು ಶನಿವಾರ ರಾತ್ರಿ ಮತ್ತು ರವಿವಾರ ಮುಂಜಾನೆಯ ಸಮಯದಲ್ಲಿ ಕೊಚ್ಚಿ ಸಮುದ್ರ ತೀರವನ್ನು ಸುರಕ್ಷಿತವಾಗಿ ತಲುಪಿರುವುದಾಗಿ ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಚಂಡಮಾರುತದಿಂದ ತೀವ್ರ ನಷ್ಟ ಅನುಭವಿಸಿರುವ ಕೇರಳದಲ್ಲಿ ಸಂತ್ರಸ್ತರ ಪುನರ್ವಸತಿಗಾಗಿ 1834 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ಗೃಹಸಚಿವ ರಾಜ್‌ನಾಥ್ ಸಿಂಗ್ ಅವರಲ್ಲಿ ಮನವಿ ಮಾಡಿದ್ದಾರೆ. ಚಂಡಮಾರುತದ ಹಾವಳಿಗೆ 38 ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು, 96 ಮೀನುಗಾರರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ವಿಜಯನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News