ಹಾಕಿ ವರ್ಲ್ಡ್ ಲೀಗ್ ಫೈನಲ್: ಆಸ್ಟ್ರೇಲಿಯಕ್ಕೆ ಚಿನ್ನ, ಭಾರತಕ್ಕೆ ಕಂಚು

Update: 2017-12-10 18:17 GMT

ಭುವನೇಶ್ವರ, ಡಿ.10: ಹಾಕಿ ವರ್ಲ್ಡ್ ಲೀಗ್ ಫೈನಲ್‌ನ ಪ್ರಶಸ್ತಿಯ ಸುತ್ತಿನ ಪಂದ್ಯದಲ್ಲಿ ಅರ್ಜೆಂಟೀನವನ್ನು 2-1 ಅಂತರದಲ್ಲಿ ಮಣಿಸಿದ ಆಸ್ಟ್ರೇಲಿಯ ಚಿನ್ನ ಪಡೆದಿದೆ.

ಆಸ್ಟ್ರೇಲಿಯದ ಬ್ಲಾಕ್ ಗೋವೆರ್ಸ್‌ 58ನೇ ನಿಮಿಷದಲ್ಲಿ ಗೋಲು ಜಮೆ ಮಾಡಿ ಆಸ್ಟ್ರೇಲಿಯಕ್ಕೆ ಎರಡನೇ ಬಾರಿ ಪ್ರಶಸ್ತಿ ಜಯಿಸಲು ನೆರವಾದರು.

ಪಂದ್ಯದ ಪ್ರಥಮಾರ್ಧದಲ್ಲಿ ಆಸ್ಟ್ರೇಲಿಯ 17ನೇ ನಿಮಿಷದಲ್ಲಿ 1-0 ಮೇಲುಗೈ ಸಾಧಿಸಿತ್ತು. ಜೆರ್ಮಿ ಹಾಯ್‌ವರ್ಡ್ ಗೋಲು ಜಮೆ ಮಾಡಿ ಆಸ್ಟ್ರೇಲಿಯಕ್ಕೆ ತಂಡಕ್ಕೆ ಮೇಲುಗೈ ಸಾಧಿಸಲು ನೆರವಾದರು. ಆದರೆ 18ನೇ ನಿಮಿಷದಲ್ಲಿ ಅರ್ಜೆಂಟೀನದ ಆಗಸ್ಟಿನ್ ಬುಗಾಲ್ಲೊ ಗೋಲು ಮಾಡಿ 1-1 ಸಮಬಲ ಸಾಧಿಸಿದರು. ಪಂದ್ಯ ಕೊನೆಗೊಳ್ಳಲು 2 ನಿಮಿಷ ಬಾಕಿ ಇದ್ದಾಗ ಆಸ್ಟ್ರೇಲಿಯದ ಬ್ಲಾಕ್ ಗೋವೆರ್ಸ್‌ ಗೋಲು ಜಮೆ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

►ಹಾಕಿ ವರ್ಲ್ಡ್ ಲೀಗ್ ಫೈನಲ್‌ನ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿಯನ್ನು 2-1 ಅಂತರದಲ್ಲಿ ಮಣಿಸಿದ ಭಾರತ ಕಂಚು ಬಾಚಿಕೊಂಡಿದೆ.

ಕಳಿಂಗಾ ಸ್ಟೇಡಿಯಂನಲ್ಲಿ ರವಿವಾರ ಪಂದ್ಯ ಕೊನೆಗೊಳ್ಳಲು 6 ನಿಮಿಷ ಬಾಕಿ ಇದ್ದಾಗ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಅವಕಾಶದಲ್ಲಿ ದಾಖಲಿಸಿದ ಗೋಲು ನೆರವಿನಲ್ಲಿ ಭಾರತ ಗೆಲುವಿನ ದಡ ಸೇರಿತು.

ಪ್ರಥಮಾರ್ಧದ 20ನೇ ನಿಮಿಷದಲ್ಲಿ ಭಾರತದ ಎಸ್.ವಿ. ಸುನೀಲ್ ಗೋಲು ಕಬಳಿಸಿ ಭಾರತಕ್ಕೆ 1-0 ಮುನ್ನಡೆಗೆ ನೆರವಾದರು.

 ಪ್ರಥಮಾರ್ಧದಲ್ಲಿ 1-0 ಮುನ್ನಡೆ ಸಾಧಿಸಿದ್ದ ಭಾರತಕ್ಕೆ ದ್ವಿತೀಯಾರ್ಧದಲ್ಲಿ ಜರ್ಮನಿ ತಿರುಗೇಟು ನೀಡಿದರು. 36ನೇ ನಿಮಿಷದಲ್ಲಿ ಮಾರ್ಕ್ ಅಪ್ಪೆಲ್ ಗೋಲು ಬಾರಿಸಿ 1-1 ಸಮಬಲ ಸಾಧಿಸಿದರು. 54ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಗೋಲು ಜಮೆ ಮಾಡಿ ಭಾರತಕ್ಕೆ 2-1 ಗೆಲುವಿಗೆ ನೆರವಾದರು. ಭಾರತ ಈ ಗೆಲುವಿನೊಂದಿಗೆ ಹಕಿ ವರ್ಲ್ಡ್ ಲೀಗ್ ಫೈನಲ್‌ನಲ್ಲಿ ಸತತ ಎರಡನೇ ಬಾರಿ ಕಂಚು ಪಡೆದಿದೆ.

ಒಡಿಶಾ ಸರಕಾರದಿಂದ ನಗದು ಬಹುಮಾನ

ಹಾಕಿ ವರ್ಲ್ಡ್ ಲೀಗ್‌ನಲ್ಲಿ ಕಂಚು ಜಯಿಸಿದ ಭಾರತದ ಹಾಕಿ ತಂಡದ ಸದಸ್ಯರಿಗೆ ಒಡಿಶಾ ಸರಕಾರ ತಲಾ 10 ಲಕ್ಷ ರೂ. ನಗದು ಬಹುಮಾನ ಪ್ರಕಟಿಸಿದೆ.

ಹಾಕಿ ತಂಡದ ಸಹಾಯಕ ಸಿಬ್ಬಂದಿಗೆ ತಲಾ 2 ಲಕ್ಷ ರೂ. ನಗದು ಬಹುಮಾನವನ್ನು ಒಡಿಶಾ ಸರಕಾರ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News