ವರ್ಲ್ಡ್ ಸ್ಕ್ವಾಷ್ ಚಾಂಪಿಯನ್‌ಶಿಪ್: ಘೋಸಾಲ್ 2ನೇ ಸುತ್ತಿಗೆ

Update: 2017-12-11 18:14 GMT

ಲಂಡನ್, ಡಿ.11: ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಸ್ಕ್ವಾಷ್ ಚಾಂಪಿಯನ್‌ಶಿಪ್‌ನ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಸೌರವ್ ಘೋಸಾಲ್ ಎರಡನೇ ಸುತ್ತು ತಲುಪಿದ್ದಾರೆ.

ರಾಷ್ಟ್ರೀಯ ಚಾಂಪಿಯನ್ ಘೋಸಾಲ್ ಮಾತ್ರ ಸ್ಪರ್ಧಾ ಕಣದಲ್ಲಿ ಉಳಿದುಕೊಂಡಿದ್ದಾರೆ. ಆದರೆ ಮಹೇಶ್ ಮಂಗಾವುಂಕರ್‌ಮತ್ತು ಹರೀಂದರ್ ಪಾಲ್ ಸಾಂಧು ಅವರು ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದಾರೆ.

  ಘೋಸಾಲ್ ಮೊದಲ ಸುತ್ತಿನಲ್ಲಿ ಇಂಗ್ಲೆಂಡ್‌ನ ಜೇಮ್ಸ್ ವಿಲ್‌ಸ್ಟ್ರೋಪ್ ವಿರುದ್ಧ ಜಯ ಸಾಧಿಸಿ ಎರಡನೇ ಸುತ್ತು ತಲುಪಿದರು. ವಿಲ್‌ಸ್ಟ್ರೋಪ್ ಮೊದಲ ಆಟದಲ್ಲಿ 6-11 ಹಿನ್ನಡೆ ಅನುಭವಿಸಿದ್ದಾಗ ಕಣದಿಂದ ನಿವೃತ್ತರಾದರು. ಇದರಿಂದಾಗಿ ಘೋಸಾಲ್ ಎರಡನೇ ಸುತ್ತು ಸುಲಭವಾಗಿ ಪ್ರವೇಶಿಸಿದರು.

ಘೋಸಾಲ್ ಮುಂದಿನ ಸುತ್ತಿನಲ್ಲಿ ಇಂಗ್ಲೆಂಡ್‌ನ ಬೆನ್ ಕೊಲ್ಮೆನ್ ಅವರನ್ನು ಎದುರಿಸಲಿದ್ದಾರೆ. ಬೆನ್ ಅವರು ಸಾಂಧು ವಿರುದ್ಧ ಮೊದಲ ಸುತ್ತಿನಲ್ಲಿ 11-4, 11-6, 11-4 ಅಂತರದಲ್ಲಿ ಜಯ ಗಳಿಸಿದ್ದರು. ಮಹೇಶ್ 13ನೇ ಶ್ರೇಯಾಂಕದ ಇಂಗ್ಲೆಂಡ್‌ನ ಸೆಲ್ಬೈ ವಿರುದ್ಧ 8-11, 5-11, 5-11 ಅಂತರದಲ್ಲಿ ಸೋಲು ಅನುಭವಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News