ಪಾಕ್ ಅಧಿಕಾರಿಯೊಂದಿಗೆ 20ಕ್ಕೂ ಹೆಚ್ಚು ರಹಸ್ಯ ಸಭೆ ನಡೆಸಿದ್ದರು ಅಡ್ವಾಣಿ!

Update: 2017-12-13 11:10 GMT

ಹೊಸದಿಲ್ಲಿ, ಡಿ.13: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಹಿತ ಹಲವು ಕಾಂಗ್ರೆಸ್ ನಾಯಕರು ಮಣಿಶಂಕರ್ ಅಯ್ಯರ್ ಅವರ ನಿವಾಸದಲ್ಲಿ ಪಾಕಿಸ್ತಾನಿ ಅಧಿಕಾರಿಗಳೊಂದಿಗೆ ರಹಸ್ಯ ಸಭೆ ನಡೆಸಿದ್ದಾರೆಂದು ಪ್ರಧಾನಿ ಇತ್ತೀಚೆಗೆ ಆರೋಪಿಸಿದ್ದರು. ಆದರೆ ಹದಿನೇಳು ವರ್ಷಗಳ  ಹಿಂದೆ ಅಂದರೆ 2000ರಲ್ಲಿ ಎನ್ ಡಿಎ-1 ಸರಕಾರದ ಅವಧಿಯಲ್ಲಿ ಕೇಂದ್ರ ಗೃಹಸಚಿವರಾಗಿದ್ದ ಎಲ್.ಕೆ. ಅಡ್ವಾಣಿಯವರು ಪಾಕಿಸ್ತಾನದ ಹೈಕಮಿಷನರ್ ಅಶ್ರಫ್ ಜಹಾಂಗೀರ್ ಖಾಝಿ ಅವರ ಜತೆಗೆ 20ಕ್ಕೂ ಅಧಿಕ ರಹಸ್ಯ ಸಭೆಗಳನ್ನು ನಡೆಸಿದ್ದರೆಂದು ಸ್ವತಃ ಅಡ್ವಾಣಿ 2008ರಲ್ಲಿ ಬಿಡುಗಡೆಯಾದ ತಮ್ಮ ಆತ್ಮಕಥನ `ಮೈ ಕಂಟ್ರಿ, ಮೈ ಲೈಫ್' ನಲ್ಲಿ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಅಡ್ವಾಣಿ 2006ರಲ್ಲಿ ಹಿರಿಯ ಪತ್ರಕರ್ತ ಕರಣ್ ಥಾಪರ್ ಅವರ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲೂ ಹೇಳಿಕೊಂಡಿದ್ದರು. ಈ ಸಭೆಗಳನ್ನು ಏರ್ಪಾಟು ಮಾಡುವಲ್ಲಿ ಥಾಪರ್ ಅವರು ಸಹಕರಿಸಿದ್ದರೆಂಬುದನ್ನೂ ಅಡ್ವಾಣಿ ಆಗ ತಿಳಿಸಿದ್ದರು. ಆದರೆ ಮಣಿಶಂಕರ್ ಅಯ್ಯರ್ ಪಾಕ್ ಅಧಿಕಾರಿಗಳೊಂದಿಗೆ 'ರಹಸ್ಯ ಸಭೆ'ಗಳನ್ನು ನಡೆಸಿರಲಿಲ್ಲ.

ಆಗಿನ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರು ಪಂಡಾರ ರಸ್ತೆಯಲ್ಲಿದ್ದ ಅಡ್ವಾಣಿ ನಿವಾಸದಲ್ಲಿ ಬೆಳಗ್ಗೆ 10 ಗಂಟೆಗೆ ಮೊದಲ ಸಭೆಗೆ ಏರ್ಪಾಡು ಮಾಡಲು ಸಹಕರಿಸಿದ್ದರು ಎಂದು 2008ರಲ್ಲಿ ಥಾಪರ್ ತಮ್ಮ 'ಹಿಂದೂಸ್ಥಾನ್ ಟೈಮ್ಸ್' ಅಂಕಣದಲ್ಲಿ, ಬರೆದಿದ್ದರು. ಥಾಪರ್ ಅವರೇ ಖಾಝಿಯವರನ್ನು  ಅಡ್ವಾಣಿ ನಿವಾಸಕ್ಕೆ ಕರೆದೊಯ್ದು ಅಡ್ವಾಣಿಯವರನ್ನು ಭೇಟಿಯಾಗುವ ತನಕ ಕಾದಿದ್ದರು. ಈ ಮೊದಲ ಸಭೆ 90 ನಿಮಿಷಗಳ ತನಕ ನಡೆದಿತ್ತು.

"ಮುಂದಿನ ಒಂದು ವರ್ಷದಲ್ಲಿ ಇಂತಹ 20 ಸಭೆಗಳು ನಡೆದಿದ್ದವು. ಹೆಚ್ಚಿನ ಸಭೆಗಳು ರಾತ್ರಿ ಹೊತ್ತು ನಡೆದಿದ್ದವು. ನಾನು ಅವರನ್ನು ಕರೆದುಕೊಂಡು ಬರುವವನಾಗಿದ್ದೆ. ಪಂಡಾರ ರಸ್ತೆಯಲ್ಲಿದ್ದ ಭದ್ರತಾ ಸಿಬ್ಬಂದಿಗೆ ಕೇವಲ ನನ್ನ ಹೆಸರು ನೀಡಲಾಗಿತ್ತು. ಅಡ್ವಾಣಿ ಮತ್ತು ಅಶ್ರಫ್ ಕೊಠಡಿಗೆ ತೆರಳಿ ಮಾತುಕತೆ ನಡೆಸುತ್ತಿದ್ದರು. ನಾನು ಅಡ್ವಾಣಿ ಅವರ ಪತ್ನಿ ಹಾಗೂ ಪುತ್ರಿಯ ಜತೆ ಮಾತನಾಡುತ್ತಿದ್ದೆ. ಅವರ ಸಭೆ ಮುಗಿದ ನಂತರ ನಮ್ಮ ಜತೆ ಒಂದು ಕಪ್ ಚಹಾ ಸೇವಿಸುತ್ತಿದ್ದರು'' ಎಂದು ಥಾಪರ್ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News