ಐಒಎ ಅಧ್ಯಕ್ಷರಾಗಿ ಬಾತ್ರಾ ಅವಿರೋಧ ಆಯ್ಕೆ

Update: 2017-12-14 18:14 GMT

ಹೊಸದಿಲ್ಲಿ, ಡಿ.14: ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್‌ಐಎಚ್) ಅಧ್ಯಕ್ಷ ನರಿಂದರ್ ಬಾತ್ರಾ ಗುರುವಾರ ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಾಜೀವ್ ಮೆಹ್ತಾ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯ್ಕೆಯಾಗಿದ್ದಾರೆ.

 59ರ ಹರೆಯದ ಬಾತ್ರಾ ರಾಷ್ಟ್ರೀಯ ಒಲಿಂಪಿಕ್ ಸಮಿತಿ ಹಾಗೂ ಅಂತಾರಾಷ್ಟ್ರೀಯ ಕ್ರೀಡಾ ಫೆಡರೇಶನ್‌ನ ಮುಖ್ಯಸ್ಥರಾಗಿರುವ ಭಾರತದ ಕೆಲವೇ ಆಡಳಿತಾಧಿಕಾರಿಗಳ ಪೈಕಿ ಒಬ್ಬರಾಗಿದ್ದಾರೆ.

ಏಷ್ಯನ್ ಟೆನಿಸ್ ಫೆಡರೇಶನ್ ಅಧ್ಯಕ್ಷ ಅನಿಲ್ ಖನ್ನಾ ಕಳೆದ ವಾರ ಸ್ಫರ್ಧೆಯಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಉನ್ನತ ಹುದ್ದೆಗೆ ಬಾತ್ರಾ ಆಯ್ಕೆ ಕೇವಲ ಔಪಚಾರಿಕವಾಗಿತ್ತು.

ಐಒಎ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದ ಖನ್ನಾ ತಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದರು. ಗುರುವಾರ ನಡೆಯಲಿರುವ ವಾರ್ಷಿಕ ಮಹಾಸಭೆಯಲ್ಲಿ ಬಾತ್ರಾ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವುದಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದ್ದರು.

ಭಾರತದ ವೇಟ್‌ಲಿಫ್ಟಿಂಗ್ ಫೆಡರೇಶನ್‌ನಅಧ್ಯಕ್ಷ ಬೀರೇಂದ್ರ ಬೈಶ್ಯಾ ಆರಂಭದಲ್ಲಿ ಐಒಎ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದರು. ಆದರೆ, ಆನಂತರ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News