ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಸುಶೀಲ್

Update: 2017-12-14 18:16 GMT

ಹೊಸದಿಲ್ಲಿ, ಡಿ.14: ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿರುವ ಭಾರತದ ಕುಸ್ತಿತಾರೆ ಸುಶೀಲ್‌ಕುಮಾರ್ ಡಿ.15 ರಿಂದ 17ರ ತನಕ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

 ಮೂರು ವರ್ಷಗಳ ಬಳಿಕ ಸುಶೀಲ್ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ‘‘ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ದೇಶವನ್ನು ಮತ್ತೊಮ್ಮೆ ಪ್ರತಿನಿಧಿಸಲು ತುಂಬಾ ಸಂತೋಷವಾಗುತ್ತಿದೆ. ಇದಕ್ಕೆ ನಿಮ್ಮೆಲ್ಲರ ಶುಭ ಹಾರೈಕೆಯ ಅಗತ್ಯವಿದೆ’’ ಎಂದು ಸುಶೀಲ್ ಟ್ವೀಟ್ ಮಾಡಿದ್ದಾರೆ.

ಸುಶೀಲ್ ಕಳೆದ ತಿಂಗಳು ಇಂದೋರ್‌ನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಚಿನ್ನ ಜಯಿಸಿದ್ದರು. ಸುಶೀಲ್ ಮೂರು ವರ್ಷಗಳ ಬಳಿಕ ಕುಸ್ತಿ ಅಖಾಡಕ್ಕೆ ಧುಮುಕಿದ್ದರು.

ಮುಂದಿನ ವರ್ಷ ನಡೆಯಲಿರುವ ಕಾಮನ್‌ವೆಲ್ತ್ ಹಾಗೂ ಏಷ್ಯನ್ ಗೇಮ್ಸ್‌ನ ಜೊತೆಗೆ ಪ್ರೊ-ಕುಸ್ತಿ ಲೀಗ್‌ನಲ್ಲಿ ಭಾಗವಹಿಸಲು ಸುಶೀಲ್ ಗುರಿ ಹಾಕಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News