ಹಿಂದೂ ಬಾಹುಳ್ಯ ಕ್ಷೇತ್ರಗಳು ಸೇರಿ 3 ಸ್ಥಾನಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಗೆಲುವು

Update: 2017-12-18 15:37 GMT

ಅಹ್ಮದಾಬಾದ್, ಡಿ. 18: ಗುಜರಾತ್ ವಿಧಾನಸಭೆಯು ಈ ಬಾರಿ ನಾಲ್ವರು ಮುಸ್ಲಿಂ ಶಾಸಕರನ್ನು ಹೊಂದುವುದು ಬಹುತೇಕ ನಿಶ್ಚಯವಾಗಿದೆ. ಹಿಂದಿನ ಚುನಾವಣೆಗಳಲ್ಲಿ ಮುಸ್ಲಿಮರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾರಣ ಬಿಜೆಪಿ ಮುಸ್ಲಿಂ ಬಾಹುಳ್ಯವಿರುವ ಕ್ಷೇತ್ರಗಳಲ್ಲಿ ಗೆಲುವು ಕಾಣಲು ಸಾಧ್ಯವಾಗಿತ್ತು. ಆದರೆ ಈ ಬಾರಿ ಮುಸ್ಲಿಮರ ಮತ ವಿಭಜನೆಯಾಗಿಲ್ಲ.

ಹಿಂದೂ ಮತದಾರರೇ ಅಧಿಕವಿರುವ ವಂಕನೆರ್‌ನಂತಹ ಸ್ಥಾನದಲ್ಲೂ ಕಾಂಗ್ರೆಸ್‌ನ ಮುಸ್ಲಿಂ ಅಭ್ಯರ್ಥಿಗಳು ಜಯಿಸಿರುವುದು ಗುಜರಾತ್‌ನ ಹಿಂದೂಗಳು ಮುಸ್ಲಿಂ ಅಭ್ಯರ್ಥಿಗಳಿಗೆ ಮತ ಹಾಕುವುದಿಲ್ಲ ಎಂಬ ನಂಬಿಕೆಯನ್ನು ಹುಸಿಗೊಳಿಸಿದೆ. ಮುಸ್ಲಿಂ ಅಭ್ಯರ್ಥಿಗಳು ಹಿಂದೂಗಳ ಮುಖ್ಯವಾಗಿ ದಲಿತರ, ಪಟೇಲ್ ಸಮುದಾಯದ ಒಂದು ವಿಭಾಗದ ಮತ್ತು ವ್ಯಾಪಾರಸ್ಥರ ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಹ್ಮದಾಬಾದ್ ಜಿಲ್ಲೆಯ ಜಮಲ್ಪುರ್-ಕಡಿಯಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್‌ಬಾಯ್ ಯೂಸುಫ್‌ಬಾಯ್ ಖೇಡಾವಾಲಾ 29,000 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಶೇಕಡಾ 50 ಮುಸ್ಲಿಂ ಮತದಾರರಿದ್ದಾರೆ. ಕಳೆದ ಬಾರಿ ಬಿಜೆಪಿಯ ಭೂಷಣ್ ಅಶೋಕ್ ಭಟ್ ಈ ಕ್ಷೇತ್ರದಲ್ಲಿ 6,331 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಆ ಚುನಾವಣೆಯಲ್ಲಿ ಸಬೀರ್‌ಬಾಯ್ ಕಬಿಲ್ವಾಲಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 30,000 ಮತಗಳನ್ನು ಬಾಚಿದ್ದ ಕಾರಣ ಭಟ್ ಈ ಸ್ಥಾನದಲ್ಲಿ ಗೆಲ್ಲಲು ಸಾಧ್ಯವಾಗಿತ್ತು. ಈ ಬಾರಿ ತನ್ನ ಸಮುದಾಯದಿಂದ ಎದುರಾದ ಒತ್ತಡದ ಕಾರಣ ಕಬಿಲ್ವಾಲಾ ತಮ್ಮ ನಾಮಪತ್ರವನ್ನು ಹಿಂಪಡೆದ ಕಾರಣ ಕಾಂಗ್ರೆಸ್ ಬೃಹತ್ ಅಂತರದಲ್ಲಿ ಜಯಗಳಿಸಲು ಸಾಧ್ಯವಾಗಿದೆ.

ಅಹ್ಮದಾಬಾದ್‌ನ ದರಿಯಾಪುರ್ ಕ್ಷೇತ್ರದಿಂದ ಗಯಾಸುದ್ದೀನ್ ಶೇಕ್ 6200 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಅವರು ತಮ್ಮ ಎದುರಾಳಿ ಬಿಜೆಪಿಯ ಭರತ್ ಬರೋಟ್‌ರನ್ನು ಮಣಿಸಿದ್ದಾರೆ. ಈ ಕ್ಷೇತ್ರದಲ್ಲಿ 45% ಮುಸ್ಲಿಂ ಮತದಾರರಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರಾಜು ಮೊಮಿನ್ ಎಂಬಾತನಿಂದ ಕಾಂಗ್ರೆಸ್‌ಗೆ ನಷ್ಟವಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಮೊಮಿನ್ ಕೇವಲ 1200 ಮತಗಳನ್ನು ಪಡೆಯಲಷ್ಟೇ ಶಕ್ತರಾದರು. ಶಿವಸೇನೆಯ ಕುಂಜಲ್‌ಬಾಯ್ ಪಟೇಲ್ 1,300 ಮತಗಳನ್ನು ಗಳಿಸಿದರು. ಈ ಮತಗಳು ಬಿಜೆಪಿಯ ಪಾಲಾಗುತ್ತಿದ್ದವು.

ಮೊರ್ಬಿ ಜಿಲ್ಲೆಯ ವಂಕನೆರ್ ಕ್ಷೇತ್ರದಿಂದ ಹಾಲಿ ಶಾಸಕ ಮುಹಮ್ಮದ್‌ಜಾವಿದ್ ಅಬ್ದುಲ್‌ಮುತ್ತಲಿಬ್ ಪಿರ್ಝಾದಾ ಜಯಗಳಿಸಿದ್ದಾರೆ. ಭುಜ್‌ನಂತೆಎ ವಂಕನೆರ್ ಕೂಡಾ ಹಿಂದೂ ಬಾಹುಳ್ಯವಿರುವ ಕ್ಷೇತ್ರವಾಗಿದ್ದು ಇಲ್ಲಿ ಮುಸ್ಲಿಂ ಮತದಾರರ ಪ್ರಮಾಣ 23% ಇದೆ. 1972ರಲ್ಲಿ ಮುಹಮ್ಮದ್‌ಜಾವಿದ್ ಪೀರ್ಝಾದಾ ಅವರ ತಂದೆ ಅಬ್ದುಲ್‌ಮುತ್ತಲಿಬ್ ಪೀರ್ಝಾದಾ ಅವರು ಕೇಶುಬಾಯ್ ಪಟೇಲ್‌ರನ್ನು ಸೋಲಿಸಿದ್ದರು. ಆ ಕಾಲದಲ್ಲಿ ಪಟೇಲ್ ಜನಸಂಘದ ಅಭ್ಯರ್ಥಿಯಾಗಿದ್ದರು. ಕಳೆದ ಬಾರಿ ಕೊಲಿ ಸಮುದಾಯಕ್ಕೆ ಸೇರಿದ ಪುರುಷೋತ್ತಮ್ ಬವರ್ವ ಎಂಬವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಗೆಲ್ಲುವ ಸಾಧ್ಯತೆಗಳಿಗೆ ತಣ್ಣೀರೆರಚಿದ್ದರೆ ಈ ಬಾರಿ ಇನ್ನೊರ್ವ ಕೊಲಿ ಸಮುದಾಯದ ವ್ಯಕ್ತಿ ಗೊರ್ಧಾನ್ ಸರವೈಯಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 25,000 ಮತ ಗಳಿಸುವ ಮೂಲಕ ಪೀರ್ಝಾದಾ ಅವರ ಗೆಲುವನ್ನು ಸುಲಭಗೊಳಿಸಿದರು. ಈ ಎರಡೂ ಚುನಾವಣೆಗಳಲ್ಲೂ ಬಿಜೆಪಿ ಟಕ್ಕರ್ ಸಮುದಾಯದ ಜಿತು ಸೊಮಾನಿಯನ್ನು ಕಣಕ್ಕಿಳಿಸಿತ್ತು.

ಭುಜ್‌ನ ಕಛ್‌ನಲ್ಲಿ ಕಾಂಗ್ರೆಸ್‌ನ ಅದಮ್‌ಬಾಯ್ ಚಾಕಿ ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ನಿಮಬೆನ್ ಆಚಾರ್ಯ ವಿರುದ್ಧ ಆರಂಭದಲ್ಲಿ ಮುನ್ನಡೆ ಸಾಧಿಸಿದ್ದರೂ ಅಂತಿಮವಾಗಿ ಸೋಲನುಭವಿಸಿದ್ದಾರೆ. 20% ಮುಸ್ಲಿಂ ಮತದಾರರಿರುವ ಈ ಕ್ಷೇತ್ರದಲ್ಲಿ ಅವರು 70,000 ಮತಗಳನ್ನು ಗಳಿಸಿದ್ದಾರೆ. ಚಾಕಿ ತಮ್ಮ ಕ್ಷೇತ್ರದ ಕೆಲವು ಹಿಂದೂಗಳ ಮುಖ್ಯವಾಗಿ ದಲಿತರು, ಪಟೇಲರು ಮತ್ತು ವ್ಯಾಪಾರಿಗಳ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News