ಬ್ರೆಝಿಲ್ ಸ್ಟಾರ್ ಫುಟ್ಬಾಲ್ ಆಟಗಾರ ಕಾಕಾ ನಿವೃತ್ತಿ

Update: 2017-12-18 17:57 GMT

ರಿಯೋ ಡಿ ಜನೈರೊ, ಡಿ.18: ರಿಯಲ್ ಮ್ಯಾಡ್ರಿಡ್ ಹಾಗೂ ಮಿಲನ್ ಫುಟ್ಬಾಲ್ ಕ್ಲಬ್‌ನ ಮಾಜಿ ಮಿಡ್ ಫೀಲ್ಡರ್,2002ರ ವಿಶ್ವಕಪ್ ವಿಜೇತ ಬ್ರೆಝಿಲ್ ತಂಡದ ಸದಸ್ಯ ಕಾಕಾ ರವಿವಾರ ವೃತ್ತಿಪರ ಫುಟ್ಬಾಲ್‌ಗೆ ವಿದಾಯ ಹೇಳಿದ್ದಾರೆ.

  ‘‘ನಾನು ಇನ್ನು ಮುಂದೆ ವೃತ್ತಿಪರ ಆಟಗಾರ, ಅಥ್ಲೀಟ್ ಆಗಿ ಮುಂದುವರಿಯುವುದಿಲ್ಲ.ವಿಭಿನ್ನ ಪಾತ್ರದಲ್ಲಿ ಫುಟ್ಬಾಲ್‌ನಲ್ಲಿ ಮುಂದುವರಿಯುತ್ತೇನೆ. ಎಸಿ ಮಿಲನ್ ಫುಟ್ಬಾಲ್ ಕ್ಲಬ್‌ನಲ್ಲಿ ಕೋಚ್ ಅಥವಾ ಕ್ರೀಡಾ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಬಯಸಿದ್ದೇನೆ. ಯೋಚಿಸಿದ್ದಕ್ಕಿಂತ ಹೆಚ್ಚು ನನಗೆ ಲಭಿಸಿದೆ. ಎಲ್ಲರಿಗೂ ಧನ್ಯವಾದಗಳು ’’ ಎಂದು 35ರ ಹರೆಯದ ಕಾಕಾ ಹೇಳಿದ್ದಾರೆ.

ಬ್ರೆಝಿಲ್‌ನ ಸಾವೊಪೌಲೊದಲ್ಲಿ ವೃತ್ತಿಜೀವನ ಆರಂಭಿಸಿದ ಕಾಕಾ ತನ್ನ ಆಕರ್ಷಕ ಪ್ರದರ್ಶನದ ಮೂಲಕ ಯುರೋಪ್‌ನ ಪ್ರಮುಖ ಕ್ಲಬ್‌ನ ಗಮನ ಸೆಳೆದರು. 2003ರಲ್ಲಿ ಮಿಲನ್ ತಂಡಕ್ಕೆ ಸೇರ್ಪಡೆಯಾಗಿ ಆರು ವರ್ಷ ಆಡಿದ್ದರು.

2007ರಲ್ಲಿ ವಿಶ್ವ ಶ್ರೇಷ್ಠ ಆಟಗಾರನಿಗೆ ನೀಡುವ ಬ್ಯಾಲನ್ ಡಿ’ಒರ್ ಪ್ರಶಸ್ತಿಗೆ ಭಾಜನರಾಗಿರುವ ಕಾಕಾ 2003-04ರಲ್ಲಿ ಮಿಲನ್ ತಂಡ ಸಿರೀ ಎ ಪ್ರಶಸ್ತಿ ಜಯಿಸಲು ನೆರವಾಗಿದ್ದರು. 2007ರಲ್ಲಿ 10 ಗೋಲುಗಳನ್ನು ಬಾರಿಸಿ ಮಿಲನ್ ತಂಡಕ್ಕೆ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟಿದ್ದರು.

ಅತ್ಯಂತ ಪ್ರತಿಭಾವಂತ ಆಕ್ರಮಣಕಾರಿ ಮಿಡ್‌ಫೀಲ್ಡರ್ ಕಾಕಾ 2009ರಲ್ಲಿ ರಿಯಲ್ ಮ್ಯಾಡ್ರಿಡ್‌ಗೆ ಸೇರಿಕೊಂಡರು. ಆದರೆ, ಮ್ಯಾಡ್ರಿಡ್ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದರು.

2011ರಲ್ಲಿ ಕೋಪಾ ಡೆಲ್ ರೆ ಪ್ರಶಸ್ತಿಯನ್ನು ಜಯಿಸಿದ್ದ ಕಾಕಾ 2013ರ ಸೆಪ್ಟಂಬರ್‌ನಲ್ಲಿ ಮಿಲನ್ ಕ್ಲಬ್‌ಗೆ ವಾಪಸಾದರು.

ಬ್ರೆಝಿಲ್ ಪರ 92 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಕಾಕಾ ಒಟ್ಟು 29 ಗೋಲುಗಳನ್ನು ಬಾರಿಸಿದ್ದರು. ಮೂರು ವಿಶ್ವಕಪ್‌ಗಳಲ್ಲಿ ಬ್ರೆಝಿಲ್ ತಂಡವನ್ನು ಪ್ರತಿನಿಧಿಸಿದ್ದ ಕಾಕಾ ತವರಿನಲ್ಲಿ 2014ರಲ್ಲಿ ನಡೆದ ಫಿಫಾ ವಿಶ್ವಕಪ್‌ನಲ್ಲಿ ಕಡೆಗಣಿಸಲ್ಪಟ್ಟಿದ್ದರು. ಗಾಯದ ಸಮಸ್ಯೆಯಿಂದಾಗಿ ಕಳೆದ ವರ್ಷ ನಡೆದ ಕೋಪಾ ಅಮೆರಿಕ ಟೂರ್ನಿಯಿಂದ ಹೊರಗುಳಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News