ತ್ರಿವಳಿ ತಲಾಖ್ ಮಸೂದೆಗೆ ಬೆಂಬಲವಿದೆ, ಆದರೆ ಅದನ್ನು ಬಲಗೊಳಿಸಬೇಕು: ಕಾಂಗ್ರೆಸ್

Update: 2017-12-28 13:33 GMT

ಹೊಸದಿಲ್ಲಿ,ಡಿ.28: ತ್ರಿವಳಿ ತಲಾಖ್ ಮಸೂದೆಗೆ ತನ್ನ ಬೆಂಬಲವಿದೆ ಎಂದು ಗುರುವಾರ ಹೇಳಿದ ಕಾಂಗ್ರೆಸ್, ಆದರೆ ಅದನ್ನು ಮುಸ್ಲಿಂ ಮಹಿಳೆಯರ ಪರವಾಗಿ ಇನ್ನಷ್ಟು ಬಲಗೊಳಿಸಬೇಕು ಮತ್ತು ಮಹಿಳೆ ಹಾಗೂ ಆಕೆಯ ಮಕ್ಕಳಿಗೆ ಜೀವನಾಧಾರ ಭತ್ತೆ ಮತ್ತು ಜೀವನಾಂಶವನ್ನು ನಿಲ್ಲಿಸಬಾರದು ಎಂದು ಸಲಹೆ ನೀಡಿದೆ.

ಕಾಂಗ್ರೆಸ್ ದಿಢೀರ್ ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸುವ ಸರ್ವೋಚ್ಚ ನ್ಯಾಯಾಲಯದ ನಿರ್ಧಾರವನ್ನು ಸ್ವಾಗತಿಸಿದ ಮೊದಲ ರಾಜಕೀಯ ಪಕ್ಷವಾಗಿತ್ತು ಮತ್ತು ಇದು ಮಹಿಳೆಯರ ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲಿ ಮೊದಲ ದೃಢವಾದ ಹೆಜ್ಜೆಯಾಗಿದೆಯೆಂದು ಹೇಳಿತ್ತು ಎಂದು ತಿಳಿಸಿದ ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು, ದಿಢೀರ್ ತ್ರಿವಳಿ ತಲಾಖ್‌ನ್ನು ನಿಷೇಧಿಸುವ ಕಾನೂನನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಮತ್ತು ಈ ಕಾನೂನನ್ನು ಶಕ್ತಿಶಾಲಿಯಾಗಿಸುವ ಅಗತ್ಯವಿದೆ ಎಂದು ಭಾವಿಸಿದೆ. ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ಅದನ್ನು ಬಲಶಾಲಿಯಾಗಿಸಲು ಕೆಲವು ಸಲಹೆಗಳು ಪಕ್ಷದ ಬಳಿಯಿವೆ ಎಂದರು.

ಕಾನೂನನ್ನು ಉಲ್ಲಂಘಿಸಿದ ವ್ಯಕ್ತಿಗೆ ನಿಮಗೆ(ಸರಕಾರ)ಬೇಕಾದ ದಂಡನೆಯನ್ನು ನೀಡಿ. ಆದರೆ ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳಿಗೆ ಈ ಕಾಯ್ದೆಯಡಿ ಜೀವನಾಧಾರ ಭತ್ತೆ ಹಾಗೂ 1986ರ ಕಾಯ್ದೆಯಡಿ ಜೀವನಾಂಶ ಪಾವತಿ ನಿಲ್ಲದಂತೆ ನೋಡಿಕೊಳ್ಳಿ. ಜೀವನಾಂಶ ಮತ್ತು ಜೀವನಾಧಾರ ಭತ್ತೆಯನ್ನು ನೀಡಬೇಕಾದ ವ್ಯಕ್ತಿಯು ಜೈಲಿನಲ್ಲಿದ್ದರೆ ಅದನ್ನು ಆತನ ಆಸ್ತಿಯಿಂದ ವಸೂಲು ಮಾಡಲಾಗುತ್ತದೆ ಎನ್ನುವುದನ್ನು ಈ ಮಸೂದೆಯು ಖಚಿತ ಪಡಿಸಿಲ್ಲ ಎಂದ ಅವರು, ಮಸೂದೆಯಲ್ಲಿ ಈ ನಿಬಂಧನೆಯನ್ನು ಸೇರಿಸುವುದನ್ನು ಸರಕಾರವು ಪರಿಶೀಲಿಸಬೇಕು. ಅದು ಜಂಟಿ ಆಸ್ತಿಯಾಗಿದ್ದರೆ ಅದನ್ನು ವಿಭಾಗಿಸಿ ಜೀವನಾಂಶ ಕೊಡುವುದನ್ನೂ ಸರಕಾರವು ಪರಿಶೀಲಿಸಬೇಕು ಎಂದರು.

 ಜೀವನಾಧಾರ ಭತ್ತೆ ಮತ್ತು ಜೀವನಾಂಶ ಕೊಡಲು ಸಾಧ್ಯವಾಗುವಷ್ಟು ಆಸ್ತಿಯನ್ನು ವ್ಯಕ್ತಿಯು ಹೊಂದಿಲ್ಲದಿದ್ದರೆ ಸರಕಾರವು ಇದಕ್ಕೆ ಬೇರೆ ಯಾವುದಾದರೂ ಮಾರ್ಗವನ್ನು ರೂಪಿಸಬೇಕು ಎಂದೂ ಸುರ್ಜೆವಾಲಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News