ಜೇಟ್‌‘ಲೈ’ ಎಂದ ರಾಹುಲ್ ವಿರುದ್ಧ ಬಿಜೆಪಿಯಿಂದ ಹಕ್ಕುಚ್ಯುತಿ ಸೂಚನೆ ಮಂಡನೆ

Update: 2017-12-28 13:37 GMT

ಹೊಸದಿಲ್ಲಿ,ಡಿ.28: ವಿತ್ತಸಚಿವ ಅರುಣ ಜೇಟ್ಲಿಯವರ ಹೆಸರನ್ನು ತಿರುಚಿ ಅವರನ್ನು ಅಣಕಿಸಿದ್ದಕ್ಕಾಗಿ ಬಿಜೆಪಿಯು ಗುರುವಾರ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ಧ ಹಕ್ಕುಚ್ಯುತಿ ಸೂಚನೆಯನ್ನು ಮಂಡಿಸಿದೆ.

ನಿಯಮ 187ರಡಿ ಹಕ್ಕುಚ್ಯುತಿ ಸೂಚನೆಯನ್ನು ಮಂಡಿಸಿದ ಬಿಜೆಪಿ ಸದಸ್ಯ ಭೂಪೇಂದ್ರ ಯಾದವ ಅವರು, ಸದನದ ನಾಯಕರೂ ಆಗಿರುವ ಜೇಟ್ಲಿಯವರ ಹಕ್ಕುಚ್ಯುತಿಯನ್ನು ಗಮನಕ್ಕೆ ತೆಗೆದುಕೊಳ್ಳುವಂತೆ ಸಭಾಪತಿಗಳನ್ನು ಆಗ್ರಹಿಸಿದರು.

 ಈ ಸದನದ ಸದಸ್ಯರು ಘನತೆಯನ್ನು ಹೊಂದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ಈ ಸದನದ ಮಾನಹಾನಿಯ ದುರುದ್ದೇಶದೊಡನೆ ಜೇಟ್ಲಿಯವರ ಹೆಸರನ್ನು ಪ್ರಕಟಿಸಿದ್ದಾರೆ ಎಂದು ಅವರು ಹೇಳಿದರು.

 ಕಾಂಗ್ರೆಸ್ ಅಧ್ಯಕ್ಷರು ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಜೇಟ್ಲಿಯವರ ಹೆಸರನ್ನು ತಿರುಚಿದ ರೀತಿಯು ಹಕ್ಕುಚ್ಯುತಿ ವರ್ಗದಲ್ಲಿ ಬರುತ್ತದೆ. ಇದಕ್ಕೆ 1954ರಲ್ಲಿ ಎನ್.ಸಿ.ಚಟರ್ಜಿ ಪ್ರಕರಣದಂತಹ ಪೂರ್ವ ನಿದರ್ಶನಗಳಿವೆ. ಈ ಪೂರ್ವ ನಿದರ್ಶನವನ್ನು ಪರಿಗಣಿಸಿ ರಾಹುಲ್ ಅವರಿಗೆ ನೋಟಿಸ್‌ನ್ನು ಹೊರಡಿಸಬೇಕು ಎಂದು ಅವರು ಕೋರಿಕೊಂಡರು.

ಬುಧವಾರ ಜೇಟ್ಲಿ ಅವರು ಸದನದಲ್ಲಿ ನೀಡಿದ್ದ ಹೇಳಿಕೆಯೊಂದನ್ನು ಪ್ರಸ್ತಾಪಿಸಿದ ರಾಹುಲ್,‘ಪ್ರಿಯ ಜೇಟ್‌‘ಲೈ’-ನಮ್ಮ ಪ್ರಧಾನಿಗೆ ತನ್ನ ಮಾತುಗಳ ಅರ್ಥ ಗೊತ್ತಿರುವುದಿಲ್ಲ ಎನ್ನುವುದನ್ನು ಭಾರತಕ್ಕೆ ನೆನಪಿಸಿದ್ದಕ್ಕಾಗಿ ಕೃತಜ್ಞತೆಗಳು’ಎಂದು ಟ್ವೀಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News