ಪಾಕಿಸ್ತಾನವು 130 ಕೋಟಿ ಭಾರತೀಯರನ್ನು ಅವಮಾನಿಸಿದೆ: ಗುಲಾಂ ನಬಿ ಆಝಾದ್

Update: 2017-12-28 13:41 GMT

ಹೊಸದಿಲ್ಲಿ,ಡಿ.28: ಕುಲಭೂಷಣ್ ಜಾಧವ್ ಅವರ ಕುಟುಂಬದೊಂದಿಗೆ ಪಾಕಿಸ್ತಾನವು ನಡೆದುಕೊಂಡ ರೀತಿಯು 130 ಕೋಟಿ ಭಾರತೀಯರಿಗೆ ಮಾಡಿರುವ ಅವಮಾನ ವಾಗಿದೆ ಎಂದು ಗುರುವಾರ ರಾಜ್ಯಸಭೆಯಲ್ಲಿ ಕಿಡಿ ಕಾರಿದ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಅವರು, ನಮ್ಮ ತಾಯಂದಿರು ಮತ್ತು ಸೋದರಿಯರ ಜೊತೆ ಇನ್ನೊಂದು ರಾಷ್ಟ್ರವು ಅನುಚಿತವಾಗಿ ನಡೆದುಕೊಂಡರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು. ಇದಕ್ಕೂ ಮುನ್ನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು, ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಜಾಧವ್ ಅವರನ್ನು ಭೇಟಿಯಾಗಲು ಸೋಮವಾರ ಇಸ್ಲಾಮಾಬಾದ್‌ಗೆ ತೆರಳಿದ್ದ ಅವರ ತಾಯಿ ಮತ್ತು ಪತ್ನಿಯೊಂದಿಗೆ ಅನುಚಿತ ನಡವಳಿಕೆಯನ್ನು ಬಣ್ಣಿಸಿ ವಿವರವಾದ ಹೇಳಿಕೆಯನ್ನು ನೀಡಿದ್ದರು.

‘‘ರಾಷ್ಟ್ರದ ಘನತೆಯ ಪ್ರಶ್ನೆ ಬಂದಾಗ ನಾವು ರಾಜಕೀಯ ಮತಭೇದಗಳನ್ನು ಮರೆತು ಒಂದಾಗಿ ನಿಲ್ಲುತ್ತೇವೆ ’’ ಎಂದು ಹೇಳಿದ ಆಝಾದ್, ತನ್ನ ದೇಶದಲ್ಲಿ ಜಾಧವ್ ಸುರಕ್ಷಿತರಾಗಿದ್ದಾರೆ ಎಂದು ಪಾಕಿಸ್ತಾನ ಸರಕಾರವು ಭರವಸೆ ನೀಡಬೇಕು ಎಂದರು.

ಇನ್ನಷ್ಟು ವಿಷಯಗಳನ್ನು ಹೇಳಲು ನಾನು ಬಯಸಿದ್ದೆ. ಆದರೆ ಅದು ಜಾಧವ್‌ರನ್ನು ಬಿಡುಗಡೆಗೊಳಿಸುವ ಪ್ರಕ್ರಿಯೆಗೆ ಅಪಾಯವನ್ನುಂಟು ಮಾಡಬಹುದು, ಆದ್ದರಿಂದ ಅವನ್ನು ಹೇಳುತ್ತಿಲ್ಲ ಎಂದ ಅವರು, ನಾವು ತುಂಬ ಗದ್ದಲ ಮಾಡಿದರೆ ಜಾಧವ್ ವಿರುದ್ಧ ಪಾಕಿಸ್ತಾನವು ಮಾಡಿರುವ ಸುಳ್ಳು ಆರೋಪಗಳು ಇನ್ನಷ್ಟು ಸಮಸ್ಯಾತ್ಮಕವಾಗಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News