×
Ad

ಬ್ರಿಸ್ಬೇನ್ ಅಂತಾರಾಷ್ಟ್ರೀಯ ಸರಣಿಯಿಂದ ಹೊರಗುಳಿದ ನಡಾಲ್

Update: 2017-12-28 23:37 IST

ಮ್ಯಾಡ್ರಿಡ್, ಡಿ.28: ವಿಶ್ವದ ಅಗ್ರಮಾನ್ಯ ಟೆನಿಸ್ ತಾರೆ ರಫೆಲ್ ನಡಾಲ್ ಬ್ರಿಸ್ಬೇನ್ ಅಂತಾರಾಷ್ಟ್ರೀಯ ಟೂರ್ನಮೆಂಟ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಅವರ ಈ ವಿಳಂಬಿತ ನಿರ್ಧಾರದಿಂದ ಮುಂದಿನ ತಿಂಗಳು ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಗೂ ಅವರ ಸಿದ್ಧತೆಯನ್ನು ಅಪೂರ್ಣಗೊಳಿಸಿದೆ.

ನವೆಂಬರ್‌ನಲ್ಲಿ ಲಂಡನ್‌ನಲ್ಲಿ ನಡೆದ ವರ್ಲ್ಡ್ ಟೂರ್ ಸರಣಿಯ ಕೊನೆಯ ಹಂತದಲ್ಲಿ ಮೊಣಕಾಲು ಗಾಯದಿಂದಾಗಿ 31ರ ಹರೆಯದ ನಡಾಲ್ ಪಂದ್ಯಗಳಿಂದ ಹೊರಗುಳಿದಿದ್ದರು. ಗುರುವಾರ ಅಬುದಾಬಿಯಲ್ಲಿ ಆರಂಭವಾದ ಪ್ರದರ್ಶನ ಪಂದ್ಯದಿಂದಲೂ ರಫೆಲ್ ಆಡುವುದರಿಂದ ಹಿಂದೆ ಸರಿದಿದ್ದರು.

ಈ ಬಗ್ಗೆ ಟ್ವೀಟ್ ಮಾಡಿರುವ ನಡಾಲ್, ‘‘ಕ್ಷಮಿಸಿ ನಾನು ಈ ಬಾರಿ ಬ್ರಿಸ್ಬೇನ್‌ಗೆ ಬರುತ್ತಿಲ್ಲ ನಾನು ಆಡಬೇಕೆಂದಿದ್ದೆ. ಆದರೆ ಕಳೆದ ವರ್ಷದ ದೀರ್ಘ ಸರಣಿ ಪಂದ್ಯಗಳ ಬಳಿಕ ನಾನು ತಡವಾಗಿ ಅಭ್ಯಾಸ ಆರಂಭಿಸಿರುವುದರಿಂದಾಗಿ ನಾನು ಇನ್ನೂ ಸಂಪೂರ್ಣವಾಗಿ ಸಿದ್ಧವಾಗಿಲ್ಲ’’ ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಬ್ರಿಸ್ಬೇನ್ ಸರಣಿಯು ರವಿವಾರದಿಂದ ಆರಂಭವಾಗಲಿದೆ. ಕಳೆದ ವರ್ಷ ಗಾಯದ ಸಮಸ್ಯೆಯಿಂದ ಹೊರಬಂದ ನಂತರ ನಡಾಲ್ ಆಸ್ಟ್ರೇಲಿಯನ್ ಓಪನ್‌ನ ಫೈನಲ್‌ಗೆ ತಲುಪಿದ್ದರು ಮತ್ತು ಫ್ರೆಂಚ್ ಹಾಗೂ ಯುಎಸ್ ಓಪನ್‌ಗಳನ್ನು ಗೆದ್ದುಕೊಂಡಿದ್ದರು. ಕಳೆದ ವರ್ಷ ಬ್ರಿಸ್ಬೇನ್‌ನಲ್ಲಿ ಆಡಿದ್ದ ನಡಾಲ್ ಅಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು.

ಸದ್ಯ ರಫೆಲ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡಲು ಉತ್ಸುಕರಾಗಿದ್ದು ಶೀಘ್ರದಲ್ಲೇ ತನ್ನ ಆಸ್ಟ್ರೇಲಿಯನ್ ಅಭಿಮಾನಿಗಳನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ ಸರಣಿಯು ಜನವರಿ 15ರಿಂದ 28ರ ವರೆಗೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News