ಲಾರಾ ದಾಖಲೆಯನ್ನು ಹಿಂದಿಕ್ಕಿದ ಕುಕ್

Update: 2017-12-28 18:20 GMT

ಮೆಲ್ಬೋರ್ನ್, ಡಿ.28: ಇಂಗ್ಲೆಂಡ್ ತಂಡ ಆ್ಯಶಸ್ ಸರಣಿಯ ಮೂರು ಪಂದ್ಯಗಳಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿದ್ದರೂ ಆರಂಭಿಕ ದಾಂಡಿಗ ಮತ್ತು ಮಾಜಿ ನಾಯಕ ಅಲಿಸ್ಟರ್ ಕುಕ್ ಬ್ಯಾಟಿಂಗ್‌ನಲ್ಲಿ ಮಿಂಚಿದ್ದಾರೆ.

ನಾಲ್ಕನೆ ಟೆಸ್ಟ್‌ನಲ್ಲಿ ಬುಧವಾರ 32ನೇ ಶತಕ ದಾಖಲಿಸಿದ್ದ ಕುಕ್ ಇಂದು ದ್ವಿಶತಕ ದಾಖಲಿಸಿ ಅಜೇಯರಾಗಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್‌ನ್ನು ಕಾಯ್ದಿರಿಸಿದ್ದಾರೆ. ಕುಕ್ ಅವರು ಐದನೇ ದ್ವಿಶತಕ ದಾಖಲಿಸಿದ್ದಾರೆ. ಅವರು 208 ರನ್ ಗಳಿಸುತ್ತಿದ್ದಂತೆ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗರಿಷ್ಠ ಸ್ಕೋರ್ ಗಳಿಸಿದ್ದ ಆಟಗಾರ ಎಂಬ ದಾಖಲೆ ಬರೆದಿದ್ದ ವೆಸ್ಟ್‌ಇಂಡೀಸ್‌ನ ಗ್ರೇಟ್ ವಿವಿಯನ್ ರಿಚರ್ಡ್ಸ್ ದಾಖಲೆಯನ್ನು ಹಿಂದಿಕ್ಕಿದ್ದರು. ರಿಚರ್ಡ್ಸ್ ಅವರು 1984ರಲ್ಲಿ ಮೆಲ್ಬೋರ್ನ್‌ನಲ್ಲಿ ದಾಖಲೆ ಬರೆದಿದ್ದರು.

  ಇದಕ್ಕೂ ಮೊದಲು ಕುಕ್ ಅವರು 200ರನ್ ಗಳಿಸಿ 1928ರಲ್ಲಿ ತಮ್ಮ ದೇಶದ ವ್ಯಾಲಿ ಹಮ್ಮಂಡ್ ಅವರ ಸಾಧನೆಯನ್ನು ಹಿಂದಿಕ್ಕಿದರು.

  151ನೇ ಟೆಸ್ಟ್‌ನಲ್ಲಿ ಕುಕ್ ಅವರು 360 ಎಸೆತಗಳಲ್ಲಿ 23 ಬೌಂಡರಿಗಳ ಸಹಾಯದಿಂದ ದ್ವಿಶತಕ ಪೂರ್ಣಗೊಳಿಸಿದರು. 409 ಎಸೆತಗಳಲ್ಲಿ 244 ರನ್ ಗಳಿಸಿರುವ ಕುಕ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ವಿಶ್ವದ ಆರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದ ವೆಸ್ಟ್ ಇಂಡೀಸ್‌ನ ಗ್ರೇಟ್ ಬ್ರಿಯಾನ್ ಲಾರಾ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಲಾರಾ ಅವರು 131 ಟೆಸ್ಟ್‌ಗಳ 232 ಇನಿಂಗ್ಸ್‌ಗಳಲ್ಲಿ 11,953 ರನ್ ಗಳಿಸಿದ್ದರು. ಇದೀಗ ಕುಕ್ ಅವರು 151 ಪಂದ್ಯಗಳ 273 ಇನಿಂಗ್ಸ್‌ಗಳಲ್ಲಿ 11,956 ರನ್ ಗಳಿಸಿದ್ದಾರೆ. 12 ಸಾವಿರ ರನ್‌ಗಳ ಮೈಲುಗಲ್ಲನ್ನು ಮುಟ್ಟಲು ಅವರು ಇನ್ನು 44 ರನ್ ಗಳಿಸಬೇಕಾಗಿದೆ.

ಕುಕ್ ಕಳೆದ ಆಗಸ್ಟ್ 17ರಂದು ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದ್ವಿಶತಕ (243) ಗಳಿಸಿದ್ದರು. ಅವರು ಪ್ರಸಕ್ತ ಸಾಲಿನಲ್ಲಿ ಎರಡನೇ ದ್ವಿಶತಕ ದಾಖಲಿಸಿದ್ದಾರೆ.

►ಎರಡು ಬಾರಿ ಜೀವದಾನ ನೀಡಿದ ಸ್ಮಿತ್: ಅಲಿಸ್ಟರ್ ಕುಕ್ ಅವರು ದ್ವಿಶತಕದ ಹಾದಿಯಲ್ಲಿ ಎರಡು ಬಾರಿ ಜೀವದಾನ ಪಡೆದಿದ್ದಾರೆ. ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ಅವರು ಕುಕ್‌ಗೆ ಜೀವದಾನ ನೀಡಿದ ಆಸ್ಟ್ರೇಲಿಯದ ಆಟಗಾರ.

ಬುಧವಾರ ಕುಕ್ ಅವರು 66 ರನ್ ಗಳಿಸಿದ್ದಾಗ ಸ್ಮಿತ್ ಕ್ಯಾಚ್ ಕೈ ಚೆಲ್ಲುವ ಮೂಲಕ ಕುಕ್‌ಗೆ ಜೀವದಾನ ನೀಡಿದ್ದರು. ಕುಕ್ ಅವರು 153 ರನ್ ಗಳಿಸಿದ್ದಾಗ ಸ್ಮಿತ್ ಅವರು ಇನ್ನೊಂದು ಬಾರಿ ಕ್ಯಾಚ್‌ನ್ನು ನೆಲಕ್ಕೆ ಕೈ ಚೆಲ್ಲಿ ಎರಡನೇ ಬಾರಿ ಜೀವದಾನ ನೀಡಿದರು.

ರೂಟ್ ಅವರು ಸರಣಿಯಲ್ಲಿ ಮೂರನೇ ಅರ್ಧಶತಕ ದಾಖಲಿಸಿದ್ದರೂ ಶತಕ ತಲುಪುವಲ್ಲಿ ಎಡವಿದರು.

ಡಾವಿಡ್ ಮಿಲಾನ್ ಮೂರನೇ ಟೆಸ್ಟ್‌ನಲ್ಲಿ ಶತಕ ದಾಖಲಿಸಿದ್ದರು. ಆದರೆ ನಾಲ್ಕನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಅವರಿಗೆ 14 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಮೊಯಿನ್ ಅಲಿ 7 ಇನಿಂಗ್ಸ್‌ಗಳಲ್ಲಿ 6ನೇ ಬಾರಿ ಲಿನ್‌ಗೆ ವಿಕೆಟ್ ಒಪ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News