ಕಪ್ಪಾದ ಸಿಯಾಂಗ್ ನದಿ: ಕಾರಣ ಇನ್ನೂ ಅಸ್ಪಷ್ಟ
ಹೊಸದಿಲ್ಲಿ, ಡಿ.30: ಕೆಲವು ವಾರಗಳ ಹಿಂದೆ ಅರುಣಾಚಲ ಪ್ರದೇಶದಲ್ಲಿ ಹರಿಯುವ ಸಿಯಾಂಗ್ ನದಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು ಇದಕ್ಕೆ ಕಾರಣ ಮಾತ್ರ ಇನ್ನು ಕೂಡಾ ಸ್ಪಷ್ಟವಾಗಿಲ್ಲ. ಕಳೆದ ನವೆಂಬರ್‌ನಲ್ಲಿ ಟಿಬೆಟ್‌ನಲ್ಲಿ ಸಂಭವಿಸಿದ ಸರಣಿ ಭೂಕಂಪದ ಪರಿಣಾಮವಾಗಿ ನದಿ ನೀರು ಕಪ್ಪಾಗಿರಬಹುದು ಎಂದು ಕೆಲದಿನಗಳ ಹಿಂದೆ ಚೀನಾ ತಿಳಿಸಿತ್ತು. ಚೀನಾದ ಭಾಗದಲ್ಲಿ ಬೃಹತ್ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು ಇದು ನದಿಗೆ ಬಿದ್ದರೆ ಅರುಣಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ವ್ಯಾಪಕ ನೆರೆಹಾವಳಿ ಸಂಭವಿಸುವ ಸಾಧ್ಯತೆಯಿದೆ ಎಂದು ಚೀನಾ ಭಾರತವನ್ನು ಎಚ್ಚರಿಸಿದೆ.
ಈ ಬಗ್ಗೆ ಡಿಸೆಂಬರ್ 28ರಂದು ಸಂಸತ್‌ನಲ್ಲಿ ನೀಡಿದ ಉತ್ತರದಲ್ಲಿ ಕೇಂದ್ರ ಜಲಸಂಪನ್ಮೂಲ ರಾಜ್ಯ ಸಚಿವ ಅರ್ಜುನ್ ರಾಮ್ ಮೆಗ್ವಾಲ್, ಕೇಂದ್ರ ಸರಕಾರವು ತನ್ನ ಕಾಳಜಿ ಮತ್ತು ನಿಲುವಿನ ಬಗ್ಗೆ ಚೀನಾ ಸರಕಾರಕ್ಕೆ ಪತ್ರ ಮುಖೇನ ತಿಳಿಸಿರುವುದಾಗಿ ಹೇಳಿಕೆ ನೀಡಿದ್ದರು. ಸಿಯಾಂಗ್ ನದಿಯ ಬಣ್ಣ ಅದು ಭಾರತವನ್ನು ಪ್ರವೇಶಿಸುವ ಟುಟಿಂಗ್‌ನಲ್ಲಿ ಬದಲಾಗಿದ್ದು ಇದಕ್ಕೆ ನದಿಯಲ್ಲಿರುವ ಹೂಳು ಕೂಡಾ ಕಾರಣವಾಗಿರಬಹುದು ಎಂದು ಸಚಿವರು ತಿಳಿಸಿದ್ದರು. ಭಾರತಕ್ಕೆ ಪ್ರವೇಶಿಸುವ ಭಾಗದಲ್ಲಿ ನದಿಯ ನೀರಿನ ಮಟ್ಟ ಏಕಾಏಕಿ ಕಡಿಮೆಯಾಗಿದೆ ಎಂದು ಸಚಿವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿಯಾಂಗ್ ನದಿಯ ಬಣ್ಣ ಬದಲಾಗಲು ಟುಟಿಂಗ್‌ನಲ್ಲಿ ಸಂಭವಿಸಿರುವ ಭೂಕುಸಿತ, ಭೂಕಂಪ ಅಥವಾ ಇತರ ಯಾವುದೇ ಭೌಗೋಳಿಕ ಘಟನೆಗಳು ಕಾರಣವಾಗಿರಬಹುದು. ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹಾಗಾಗಿ ನದಿಯ ಬಣ್ಣ ಬದಲಾಗಲು ಕಾರಣ ಕೂಡಾ ಸ್ಪಷ್ಟವಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ಆದರೆ ಚೀನಾದ ಭಾಗದಲ್ಲಿ ಭೂಕುಸಿತ ಸಂಭವಿಸಿ ಮಣ್ಣು ಶೇಖರಣೆಯಾಗಿದ್ದು ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ನೆರೆಗೆ ತುತ್ತಾಗುವ ಸಾಧ್ಯತೆಯ ಬಗ್ಗೆ ಸಚಿವರು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿಲ್ಲ.