×
Ad

ಕಲ್ಲಿದ್ದಲು ಹಗರಣ: ಮಧು ಕೋಡ ಜೈಲುಶಿಕ್ಷೆಗೆ ತಡೆಯಾಜ್ಞೆ

Update: 2018-01-02 19:14 IST

ಹೊಸದಿಲ್ಲಿ, ಜ.2: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮಧು ಕೋಡಾರಿಗೆ ವಿಧಿಸಲಾಗಿದ್ದ ಜೈಲುಶಿಕ್ಷೆಗೆ ದಿಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

 ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿ ಕೋಡಾಗೆ ವಿಧಿಸಲಾಗಿದ್ದ 25 ಲಕ್ಷ ರೂ. ದಂಡ ಪಾವತಿಸುವ ಆದೇಶಕ್ಕೂ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ವಿಚಾರಣೆಯವರೆಗೆ ಕೋಡಾಗೆ ಮಧ್ಯಂತರ ಜಾಮೀನು ಮಂಜೂರುಗೊಳಿಸಿದ್ದು, ಜಾಮೀನು ಅವಧಿಯಲ್ಲಿ ದೇಶ ಬಿಟ್ಟು ತೆರಳದಂತೆ ಷರತ್ತು ವಿಧಿಸಿದೆ.

      ಜಾರ್ಖಂಡ್‌ನ ಕಲ್ಲಿದ್ದಲು ಗಣಿಯೊಂದನ್ನು ಕೋಲ್ಕತಾ ಮೂಲದ ಸಂಸ್ಥೆ ‘ವಿಸುಲ್’ಗೆ ಅಕ್ರಮವಾಗಿ ಹಂಚಿಕೆ ಮಾಡಿದ ಪ್ರಕರಣದಲ್ಲಿ ಕೋಡಾ ಭ್ರಷ್ಟಾಚಾರ ನಡೆಸಿರುವುದು ಸಾಬೀತಾಗಿದೆ ಎಂದು ತೀರ್ಪು ನೀಡಿದ್ದ ವಿಚಾರಣಾ ನ್ಯಾಯಾಲಯವೊಂದು ಕೋಡಾಗೆ 3 ವರ್ಷ ಜೈಲುಶಿಕ್ಷೆ ಹಾಗೂ 25 ಲಕ್ಷ ರೂ. ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಕೋಡಾ ದಿಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಮನವಿಯ ವಿಚಾರಣೆ ಮುಗಿಯುವವರೆಗೆ ತನಗೆ ನೀಡಲಾಗಿರುವ ಸಜೆಗೆ ತಡೆಯಾಜ್ಞೆ ನೀಡಬೇಕು ಮತ್ತು ಕ್ರಮಬದ್ಧ ಜಾಮೀನು ಮಂಜೂರುಗೊಳಿಸಬೇಕು ಎಂದು ಕೋರಿದ್ದರು.

   ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಮಲ್ಹೋತ್ರಾ ತಡೆಯಾಜ್ಞೆ ನೀಡಿದರು. ಆದರೆ ಕ್ರಮಬದ್ಧ ಜಾಮೀನಿನ ಬದಲು ಮಧ್ಯಂತರ ಜಾಮೀನು ಮಂಜೂರುಗೊಳಿಸಿದರು. ತಡೆಯಾಜ್ಞೆ ಕೋರಿದ ಅರ್ಜಿಯನ್ನು ಸಿಬಿಐ ವಕೀಲ ತರನ್ನಮ್ ಚೀಮಾ ವಿರೋಧಿಸಿದರು. ಆದರೆ ಜನವರಿ 22ರವರೆಗೆ ಕೋಡಾಗೆ ಮಧ್ಯಂತರ ಜಾಮೀನು ಮಂಜೂರುಗೊಳಿಸಿರುವುದನ್ನು ಅವರು ವಿರೋಧಿಸಲಿಲ್ಲ.

   ‘ವಿಸುಲ್’ಗೆ ವಿಧಿಸಲಾಗಿರುವ 50 ಲಕ್ಷ ರೂ. ದಂಡದ ಆದೇಶಕ್ಕೆ ಹೈಕೋರ್ಟ್ ಜ.22ರವರೆಗೆ ತಡೆಯಾಜ್ಞೆ ನೀಡಿತ್ತು. ಅಲ್ಲದೆ ಕಲ್ಲಿದ್ದಲು ಹಗರಣದಲ್ಲಿ ತನಗೆ ವಿಧಿಸಲಾಗಿರುವ 3 ವರ್ಷ ಜೈಲುಶಿಕ್ಷೆಗೆ ತಡೆಯಾಜ್ಞೆ ನೀಡಬೇಕೆಂದು ಕೋಡಾರ ನಿಕಟವರ್ತಿ ವಿಜಯ್ ಜೋಷಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಡಿ.20ರಂದು ಸಿಬಿಐಗೆ ಸೂಚಿಸಿತ್ತು.

ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಈ ಮೂರೂ ಪ್ರಕರಣಗಳ ವಿಚಾರಣೆಯನ್ನು ಹೈಕೋರ್ಟ್ ಜ.22ರಂದು ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News