ಕರಾವಳಿ ಕೋಮು ಪ್ರದೇಶವಲ್ಲ..!

Update: 2018-01-03 17:32 GMT

ಐದು ವರ್ಷಗಳ ಹಿಂದಿನ ಮಾತು. ನನ್ನ ತಂದೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಆಗಬೇಕಿತ್ತು. ಮಂಗಳೂರು ಕೆ.ಎಂ.ಸಿ. ಯಲ್ಲಿ ದಾಖಲಾಗಿದ್ದರು. ವೈದ್ಯರು ಶೀಘ್ರವೇ 3 ಯೂನಿಟ್ ರಕ್ತ ತಯಾರು ಮಾಡಿರಿ ಎಂದಿದ್ದರು.  ಬ್ಲಡ್ ಬ್ಯಾಂಕಲ್ಲಿ ರಕ್ತ ಶೇಖರಣೆ ಇರಲಿಲ್ಲ. ತಕ್ಷಣ ನನ್ನ ಮುಸ್ಲಿಂ ಸ್ನೇಹಿತರಿಗೆ ಫೋನಾಯಿಸಿದೆ. ಸಕರಾತ್ಮಕ ಉತ್ತರ ಸಿಗಲಿಲ್ಲ. ನಂತರ ರಕ್ತದಾನ ಶಿಬಿರ ನಡೆಸುವ ಕ್ರೈಸ್ತ ಸ್ನೇಹಿತನಿಗೆ ತಿಳಿಸಿದೆ. ವ್ಯವಸ್ಥೆ ಮಾಡುತ್ತೇನೆ ಎಂದವನು ಮತ್ತೆ ಫೋನ್ ಎತ್ತಲಿಲ್ಲ. ಬಳಿಕ ನೆನಪಾದವರೇ ಸ್ನೇಹಿತ ವಿಟ್ಲದ ಜೈಕಿಶನ್. ಅವರಿಗೆ ರಕ್ತ ಕೊಡಲು ಗೊತ್ತಿರಲಿಲ್ಲ. ಆದರೆ ಅವರು ಅಂದು ಮಾಂಡೋವಿ ಕಂಪೆನಿಯಲ್ಲಿದ್ದುದರಿಂದ ಅವರ ಸಹದ್ಯೋಗಿಗಳ ಮೂಲಕ ಇಬ್ಬರು ತುರ್ತಾಗಿ ಕೆ.ಎಂ.ಸಿ.ಗೆ ರಕ್ತ ಕೊಡಲು ಬಂದಿದ್ದರು. ಅವರಿಬ್ಬರೂ ಹಿಂದೂ ಸಹೋದರರು. ಒಂದು ಬಾಟಲ್ ನಾನೂ ಕೊಟ್ಟೆ. ಆ ಮೂಲಕ ರಕ್ತದ ತುರ್ತು ಅವಶ್ಯಕತೆ ಮುಗಿದಿತ್ತು. ತಂದೆಗೆ ಸುಸೂತ್ರವಾಗಿ ಹೃದಯ ಚಿಕಿತ್ಸೆ ನಡೆಯಿತು. ರಕ್ತದಾನಿಯಲ್ಲೊಬ್ಬರು ಚಿಕಿತ್ಸೆಯ ನಂತರ ತಂದೆಯ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದಿದ್ದರು. ರಕ್ತದಾನಿ ಇಬ್ಬರು ಹಿಂದೂ ಸಹೋದರರಲ್ಲೂ ತಂದೆ ಡಿಸ್ಚಾರ್ಜ್ ಆದಾಗ ತಿಳಿಸಿ ಕೃತಜ್ಞತೆ ಸಲ್ಲಿಸಿದ್ದೆ. ಅವರಿಗಾಗಿ ಸೃಷ್ಟಿಕರ್ತನಲ್ಲಿ ಪ್ರಾರ್ಥಿಸಿದ್ದೆ. ರಕ್ತ ನೀಡುವಾಗ ಇಲ್ಲಿ ಜಾತಿ ಮತದ ಗೋಡೆ ಕಟ್ಟಲಿಲ್ಲ. ಹಿಂದೂ ಸ್ನೇಹಿತರ ಕೆಂಪು ರಕ್ತ ನನ್ನ ತಂದೆಯ ಚಿಕಿತ್ಸೆಗೆ ಬಳಕೆಯಾದವು.

ಇದೀಗ ಕಳೆದ ಎರಡು ವಾರದಿಂದ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಜೊತೆಗಾರರಿಗೆ ರಾತ್ರಿಯ ಭೋಜನವನ್ನು ಎಂ.ಫ್ರೆಂಡ್ಸ್ ವತಿಯಿಂದ ನೀಡಲಾಗುತ್ತಿದೆ. ಎಂ.ಫ್ರೆಂಡ್ಸ್ 46 ಮುಸ್ಲಿಂ ಸದಸ್ಯರಿರುವ ಸಂಸ್ಥೆ. ವೆನ್ಲಾಕ್ ನಲ್ಲಿ ರಾಜ್ಯದ ನಾನಾ ಭಾಗಗಳಿಂದ ರೋಗಿಗಳು ಬರುತ್ತಾರೆ. ಶೇಕಡಾ 80 ರೋಗಿಗಳು ಹಿಂದೂ ಬಾಂಧವರು. ಹಸಿದವರಿಗೆ ಉಣಬಡಿಸುವಾಗ ಇಲ್ಲಿ ಜಾತಿ ಮತ ಅಡ್ಡ ಬಂದಿಲ್ಲ.

ಮುಸ್ಲಿಮರು ತಯಾರಿಸಿದ ಚಪಾತಿಯನ್ನು ಎಲ್ಲರೂ ತಿನ್ನುತ್ತಾರೆ. ಎಂ.ಫ್ರೆಂಡ್ಸ್ ಎಲ್ಲರನ್ನೂ ಸಮಾನವಾಗಿ ಕಂಡಿದೆ. ಮಾನವ ಧರ್ಮ ಮೇಲೈಸಿದೆ.
ತಲಪಾಡಿ ಸ್ನೇಹಾಲಯ ಸಂಸ್ಥೆಯ ಜೋಸೆಫ್ ಬಗ್ಗೆ ಹೆಚ್ಚಿನವರಿಗೆ ಗೊತ್ತು. ರಸ್ತೆಯ ಬದಿಯಲ್ಲಿ ಸೂರಿಲ್ಲದೆ ತಿರುಗಾಡುತ್ತಿರುವ ಮಾನಸಿಕ ಅಸ್ವಸ್ಥರ ಆಶ್ರಯದಾತ ಈ ಜೋಸೆಫ್. ದಿಕ್ಕು ದೆಸೆ ಇಲ್ಲದೆ ಊರೂರು ಅಲೆಯುವ ಅಸ್ವಸ್ಥರನ್ನು, ಅನಾಥರನ್ನು ಹುಡುಕಿ ಅವರ ಕುರುಚಲು ಕೂದಲುಗಳನ್ನು ಕತ್ತರಿಸಿ ಉತ್ತಮ ಚಿಕಿತ್ಸೆ ನೀಡಿ ಬಟ್ಟೆಬರೆಗಳನ್ನು ಒದಗಿಸಿ ಸಾಕಿ ಸಲಹುವವರು ಕ್ರೈಸ್ತ ಧರ್ಮದ ಜೋಸೆಫ್. ಅದೇ ಜೋಸೆಫ್ ಅವರ ಸ್ನೇಹಾಲಯ ಸಂಸ್ಥೆ ಕಳೆದ ಎರಡು ವರ್ಷದಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಯ ರೋಗಿಗಳ ಜೊತೆಗಾರರಿಗೆ ಮಧ್ಯಾಹ್ನದ ಅನ್ನಾಹಾರವನ್ನು ಉಚಿತವಾಗಿ ನೀಡುತ್ತಿದೆ. ಸಹೋದರ ಜೋಸೆಫ್ ಅವರು ತಮ್ಮ ಸೇವೆಯಲ್ಲಿ ಮಾನವ ಧರ್ಮ ದೊಡ್ಡದೆಂದು ತೋರಿಸಿ ಕೊಟ್ಟಿದ್ದಾರೆ.

ದೇರಳಕಟ್ಟೆಯ ತಬಸ್ಸುಮ್ ಮುಸ್ಲಿಮ್ ಮಹಿಳೆ. ಅವರು ಕಳೆದ ಏಳು ವರ್ಷದಿಂದ ವಿಶೇಷ ಸೇವೆ ಮಾಡ್ತಾ ಇದ್ದಾರೆ. ಎಚ್ಐವಿ ಸೋಂಕಿತ ಬಡ ಮಕ್ಕಳನ್ನು ಒಂದು ಬಾಡಿಗೆಯ ಮನೆಯಲ್ಲಿಟ್ಟು ಸಾಕಿ ಸಲಹುತ್ತಿದ್ದಾರೆ. ಅವರ ಮನೆಯಲ್ಲಿರುವ ಏಡ್ಸ್ ಪೀಡಿತ 22 ಮಕ್ಕಳಲ್ಲಿ 20 ಮಕ್ಕಳು ಕೂಡಾ ಮುಸ್ಲಿಮ್ ಸಮುದಾಯದವರಲ್ಲ. ಅವರ ಹೃದಯ ಬಡ ಎಚ್ಐವಿ ಮಕ್ಕಳಿಗಾಗಿ ಮಿಡಿಯುವಾಗ ಜಾತಿ, ಧರ್ಮ, ಭಾಷೆ ಸೇವೆಗೆ ಅಡ್ಡ ಬಂದಿಲ್ಲ.

ಮಸೀದಿ ಮುಸ್ಲಿಮರದು. ದೇವಾಲಯ ಹಿಂದೂಗಳದ್ದು. ಚರ್ಚು ಕ್ರೈಸ್ತರದು ಎಂದು ನಾವು ವಿಂಗಡಿಸುತ್ತೇವೆ. ಆದರೆ ಎಲ್ಲಾ ಧರ್ಮಗಳ ದೇವಾಲಯ ಮತ್ತೊಂದಿದೆ. ಅದುವೇ ಆಸ್ಪತ್ರೆ. ಒಮ್ಮೆ ನಾವು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯೋ ಅಥವಾ ಇತರ ಖಾಸಗಿ ಆಸ್ಪತ್ರೆಯ ವಾರ್ಡುಗಳನ್ನು ಸುತ್ತಿ ಬರಬೇಕು. ಅವರ ಕಷ್ಟ, ದುಖ ದುಮ್ಮಾನಗಳನ್ನು ಅರಿಯಬೇಕು. ಅವರ ರೋಗ, ಸಮಸ್ಯೆಗಳ ಎದುರು ನಾವೇನೂ ಅಲ್ಲ. ಅಲ್ಲಿ ಜಾತಿ, ಮತ, ಧರ್ಮ, ಮತಾಂಧತೆ, ಕೋಮು ಪ್ರಚೋದನೆ, ಅಸಹಿಷ್ಣುತೆ ಯಾವುದೂ ನೆನಪಾಗುವುದಿಲ್ಲ. ಅಲ್ಲಿ ಹಿಂದೂ ರಕ್ತ ಮುಸ್ಲಿಮರಿಗಾಗುತ್ತದೆ. ಮುಸ್ಲಿಮರ ಅಂಗಾಂಗಗಳು ಕ್ರೈಸ್ತರಿಗಾಗುತ್ತದೆ. ಕ್ರೈಸ್ತರ ಸಹಕಾರ ಇನ್ಯಾರಿಗೋ ಆಗುತ್ತದೆ. ಆಸ್ಪತ್ರೆಯ ವಾರ್ಡಿನ ಹತ್ತಿರದ ಹಾಸಿಗೆಯಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತರು ಜಾತಿ ಬೇಧವಿಲ್ಲದೆ ಮಲಗಿರುತ್ತಾರೆ. ಔಷಧಿ, ಆಹಾರ ತರುವ ವಿಚಾರದಲ್ಲಿ ಪರಸ್ಪರ ಸಹಕಾರಿಗಳಾಗುತ್ತಾರೆ. ನಿಜವಾದ ದೇಗುಲವೆಂದರೆ ಆಸ್ಪತ್ರೆ ಎನ್ನಬಹುದು. ಇವೆಲ್ಲಾ ಉದಾಹರಣೆಗಳು ಕೋಮು ಸೂಕ್ಷ್ಮ ಪ್ರದೇಶ ಎಂದು ಕರೆಸಿಕೊಳ್ಳುತ್ತಿರುವ ಮಂಗಳೂರು ಪರಿಸರದ ಚಿತ್ರಣ.

ಮತ್ತೆಲ್ಲಿಂದ ಬಂತು ಈ ಹೊಡಿ, ಬಡಿ, ಕೊಲ್ಲು ಎಂಬ ಸಂಸ್ಕೃತಿ? ಕೆಲವರಿಂದ ಕೆಲವರ ಲಾಭಕ್ಕಾಗಿ ಮಾತ್ರ ಮೇಲೈಸಿರುವ ಈ ಹೀನ ಸಂಸ್ಕೃತಿಗೆ ಗತಿ ಕಾಣಿಸಬೇಕಾದ ಅನಿವಾರ್ಯತೆ ಇದೆ. ಪವಿತ್ರ ಕುರ್ ಆನ್ ಅರಿತ ಮುಸ್ಲಿಮ್, ಪವಿತ್ರ ಭಗವದ್ಗೀತೆಯನ್ನು ಅರ್ಥೈಸಿದ ಹಿಂದೂ, ಪವಿತ್ರ ಬೈಬಲ್ ನ್ನು ಮನನ ಮಾಡಿದ ಕ್ರೈಸ್ತನಿಂದ ಇಲ್ಲೇನೂ ಅಹಿತಕರ ಘಟನೆ ನಡೆಯಲಾರದು.

ಶೇಕಡಾ ಒಂದರಷ್ಟೂ ಇಲ್ಲದ ಪುಂಡರಿಂದ 99 ಶೇಕಡ ಶಾಂತಿಪ್ರಿಯ ಜನತೆಗೆ ತೊಂದರೆಯಾಗುತ್ತಿದೆ. ಯಾರೂ ಅರ್ಜಿ ಸಲ್ಲಿಸಿ ಇಂತಿಂಥ ಧರ್ಮದಲ್ಲಿ ಹುಟ್ಟಿ ಬಂದಿಲ್ಲ. ಅವರವರ ಪಾಲಕರ/ಹೆತ್ತವರಿಂದ, ಪರಿಸರದಿಂದಾಗಿ ಆಯಾಯ ಧರ್ಮವನ್ನು ಅನುಸರಿಸುತ್ತಾರೆ. ಹಾಗಂತ ಯಾವುದೇ ಧರ್ಮ ಕೋಮು ಪ್ರಚೋದನೆಯನ್ನು ಬಯಸುವುದಿಲ್ಲ. ಎಲ್ಲಾ ಧರ್ಮಗಳ ಸಾರವೂ ಸಾಮರಸ್ಯತೆಯೇ. ಎಲ್ಲರ ರಕ್ತವೂ ಕೆಂಪೇ. ಬೇರೆ ಬಣ್ಣದ ರಕ್ತ ಯಾರಲ್ಲೂ ಇಲ್ಲ. ಇಂದು ಬಣ್ಣಗಳಿಗಾಗಿ ಕಾದಾಟ ನಡೆಯುತ್ತಿದೆ. ಕೇಸರಿ ಪರಿತ್ಯಾಗದ ಸಂಕೇತ. ಬಿಳಿ ಶಾಂತಿಯ ಪ್ರತೀಕ. ಹಸಿರು ಪ್ರಕೃತಿಯ ಗೌರವವನ್ನು ಸೂಚಿಸುತ್ತದೆ. ಆದರೆ ಇದೇ ಬಣ್ಣಗಳ ಮೂಲಕ ತನ್ನ ಬೇಳೆ ಬೇಯಿಸಿಕೊಳ್ಳುವ ಮತಾಂಧರನ್ನು ಮಣಿಸುವ ಅವಶ್ಯಕತೆ ಇದೆ. ಅಲ್ಪ ಪ್ರಮಾಣದ ಕೋಮು ಕದಡುವ ಶಕ್ತಿಗಳಿಗೆ ದೊಡ್ಡ ಸಂಖ್ಯೆಯ ಸೌಹಾರ್ದತೆ ಬಯಸುವವರು ಹೆದರಬೇಕಾದ ಅನಿವಾರ್ಯತೆ ಕರಾವಳಿಯಲ್ಲಿರುವುದು ಮಾತ್ರ ದುರಂತ.
-ರಶೀದ್ ವಿಟ್ಲ.

Writer - ರಶೀದ್ ವಿಟ್ಲ.

contributor

Editor - ರಶೀದ್ ವಿಟ್ಲ.

contributor

Similar News