ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ: ಅನಿವಾಸಿ ಭಾರತೀಯರಿಗೆ ಸಿಹಿ ಸುದ್ದಿ

Update: 2018-01-10 15:09 GMT

ಹೊಸದಿಲ್ಲಿ,ಜ.10: ದೂರಸಂಪರ್ಕ ಇಲಾಖೆಯು ಅನಿವಾಸಿ ಭಾರತೀಯ(ಎನ್ನಾರೈ) ರಿಗೆ ಮೊಬೈಲ್ ಫೋನ್ ಸಂಖ್ಯೆಗೆ ಕಡ್ಡಾಯ ಆಧಾರ್ ಜೋಡಣೆಯಿಂದ ವಿನಾಯಿತಿ ನೀಡಿದೆ. ಸಾಗರೋತ್ತರ ಭಾರತೀಯ ಪ್ರಜೆ(ಒಸಿಐ) ಮತ್ತು ಭಾರತ ಮೂಲದ ವ್ಯಕ್ತಿ(ಪಿಐಒ)ಗಳಿಗೂ ಈ ವಿನಾಯಿತಿಯು ಅನ್ವಯಗೊಳ್ಳುತ್ತದೆ.

 ಮೊಬೈಲ್ ಸಂಖ್ಯೆಗಳೊಂದಿಗೆ ಆಧಾರ್ ಜೋಡಣೆಗಾಗಿ ದೂರಸಂಪರ್ಕ ಕಂಪನಿಗಳು ಒತ್ತಾಯಿಸುತ್ತಿರುವುದರಿಂದ ತಾವು ಭಾರತದಲ್ಲಿ ಪಡೆದುಕೊಂಡಿರುವ ಮೊಬೈಲ್ ಪೋನ್ ಸಂಪರ್ಕಗಳ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ ಎಂದು ವಿದೇಶಗಳಲ್ಲಿರುವ ಭಾರೀ ಸಂಖ್ಯೆಯ ಭಾರತೀಯರು ದೂರಿಕೊಂಡಿದ್ದರು ಎಂದು ಒಟ್ಟಾವಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.

 ಎನ್ನಾರೈಗಳು ಆಧಾರ್‌ಗೆ ಅರ್ಹರಲ್ಲ, ಹೀಗಾಗಿ ಅವರಿಗೆ ಮೊಬೈಲ್ ಸಂಖ್ಯೆಗಳಿಗೆ ಆಧಾರ್ ಜೋಡಣೆಯ ಪ್ರಕ್ರಿಯೆಯನ್ನು ಪಾಲಿಸಲು ಸಾಧ್ಯವಾಗುವುದಿಲ್ಲ.

ಒಟ್ಟಾವಾದ ಭಾರತೀಯ ರಾಯಭಾರಿ ಕಚೇರಿಯು ಈ ವಿಷಯವನ್ನು ದೂರ ಸಂಪರ್ಕ ಇಲಾಖೆಯ ಗಮನಕ್ಕೆ ತಂದಿದ್ದು, ಪಿಐಒಗಳು ಮತ್ತು ಒಸಿಐಗಳು ಸೇರಿದಂತೆ ವಿದೇಶಿಯರು ಮತ್ತು ಎನ್ನಾರೈಗಳಂತಹ ವರ್ಗಗಳಿಗೆ ಸೇರಿದ ಹಾಲಿ ಬಳಕೆದಾರರ ಮರು ದೃಢೀಕರಣಕ್ಕೆ ಪರ್ಯಾಯ ವಿಧಾನವನ್ನು ಬಳಸುವಂತೆ ಅದು ಎಲ್ಲ ಮೊಬೈಲ್ ಕಂಪನಿಗಳಿಗೆ ಲಿಖಿತ ನಿರ್ದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News