ಗೋವಾದ ಗೋಮಾಂಸ ಗೊಂದಲ

Update: 2018-01-12 05:37 GMT

ಗೋವಾದಲ್ಲಿ ಬೀಫ್ ಅಥವಾ ಗೋಮಾಂಸಾಹಾರಕ್ಕಾಗಿ ಹಾಹಾಕಾರವೆದ್ದಿದೆ. ಪ್ರವಾಸೋದ್ಯಮದ ಮೂಲಕವೇ ಅರ್ಥ ವ್ಯವಸ್ಥೆಯನ್ನು ರೂಪಿಸಿಕೊಂಡಿರುವ ಗೋವಾದಲ್ಲಿ ಬೀಫ್ ಅಲ್ಲಿನ ಬಹುಸಂಖ್ಯಾತರ ಆಹಾರವಾಗಿದೆ. ಬಿಜೆಪಿಯು ಗೋಮಾಂಸ ಮಾರಾಟದ ಕುರಿತಂತೆ ತಳೆದಿರುವ ಗೊಂದಲಕರ ನಿಲುವು ಗೋವಾ ಸೇರಿದಂತೆ ಹಲವು ರಾಜ್ಯಗಳ ಮೇಲೆ ತನ್ನ ಪರಿಣಾಮವನ್ನು ಬೀರಿದೆ. ಮಾರುಕಟ್ಟೆಯಲ್ಲಿ ಮಾಂಸಾಹಾರ ದುಬಾರಿಯಾಗಿದೆ. ಗೋಮಾಂಸದ ವಿರುದ್ಧ ಮಾತನಾಡುವ ಮಹಾರಾಷ್ಟ್ರ ಸರಕಾರ ಒಳಗೊಳಗೆ ಗೋಮಾಂಸ ಸೇವನೆಗೆ ಅನುಮತಿಸಿದೆ. ಗೋವಾದಲ್ಲಿ ಮಾತ್ರ ಬಿಜೆಪಿಯ ದ್ವಂದ್ವ ನೀತಿ ಸರಕಾರಕ್ಕೆ ತಿರುಗುಬಾಣವಾಗಿದೆ. ಒಂದೆಡೆ ಗೋರಕ್ಷಕರ ವೇಷದಲ್ಲಿರುವ ರೌಡಿಗಳು ಗೋಮಾಂಸ ಪೂರೈಸುವ ವ್ಯಾಪಾರಸ್ಥರ ಮೇಲೆ ದಾಳಿ ನಡೆಸುತ್ತಿದ್ದಾರೆ. ಮಗದೊಂದೆಡೆ ಇದೇ ಗೋವಾ ಸರಕಾರ ವ್ಯಾಪಕ ಪ್ರಮಾಣದಲ್ಲಿ ಗೋಮಾಂಸವನ್ನು ಆಮದು ಮಾಡುತ್ತಿದೆ. ಗೋಮಾಂಸ ಪೂರೈಕೆ ತಪ್ಪು ಎಂದಾದಲ್ಲಿ ಗೋವಾ ಸರಕಾರವೇ ಆಮದನ್ನು ನಿಲ್ಲಿಸಿದರೆ ಸಮಸ್ಯೆ ಬಗೆ ಹರಿಯುತ್ತದೆ.

ವಿಪರ್ಯಾಸವೆಂದರೆ ಬಹಿರಂಗವಾಗಿ ಗೋಮಾಂಸ ವಿರೋಧಿಯೆಂಬಂತೆ ಮಾತನಾಡುತ್ತಾ ಗುಟ್ಟಾಗಿ ಗೋವಾದ ಬಿಜೆಪಿ ಸರಕಾರ ವ್ಯಾಪಕ ಪ್ರಮಾಣದಲ್ಲಿ ಗೋಮಾಂಸವನ್ನು ಕರ್ನಾಟಕದಿಂದ ಆಮದು ಮಾಡಿಕೊಳ್ಳುತ್ತಿದೆ. ಇದರ ಪರಿಣಾಮವನ್ನು ಗೋಮಾಂಸ ವಿತರಣೆ ಮಾಡುತ್ತಿರುವ ಅಮಾಯಕ ವ್ಯಾಪಾರಿಗಳು ಎದುರಿಸಬೇಕಾಗಿದೆ. ಅವರನ್ನು ಸಮಾಜ ಅಪರಾಧಿಗಳಂತೆ ನೋಡುತ್ತಿದೆ. ಗೋರಕ್ಷಕರು ಅವರನ್ನು ಕಂಡಕಂಡಲ್ಲಿ ತಡೆದು, ಹಲ್ಲೆ ನಡೆಸಿ ದರೋಡೆ ಮಾಡುತ್ತಿದ್ದಾರೆ. ಪೊಲೀಸ್ ಠಾಣೆಗೆ ಹೋದರೆ ಇವರ ಮೇಲೆಯೇ ಕೇಸು ದಾಖಲಿಸಲಾಗುತ್ತಿದೆ. ಇದನ್ನು ಸಹಿಸಿ ಸಾಕಾಗಿರುವ ಕರ್ನಾಟಕದ ಬೀಫ್ ವ್ಯಾಪಾರಸ್ಥರು ಬೀಫ್ ಪೂರೈಕೆಯನ್ನು ನಿಲ್ಲಿಸಿದ್ದಾರೆ. ಗೋಮಾಂಸ ಪೂರೈಕೆ ನಿಲ್ಲಿಸಿದ ಬೆನ್ನಿಗೇ ಬಿಜೆಪಿಯ ಗೋಪ್ರೇಮದ ಅಸಲಿತನ ಬಯಲಾಗಿದೆ. ಗೋವಾದ ಆರ್ಥಿಕತೆಯ ಮೇಲೆ ಅದು ಬೀರುತ್ತಿರುವ ಪರಿಣಾಮವನ್ನು ಮನಗಂಡ ಈ ದೇಶದ ಮಾಜಿ ರಕ್ಷಣಾ ಸಚಿವರು, ಗೋವಾದ ಹಾಲಿ ಮುಖ್ಯಮಂತ್ರಿ, ಆರೆಸ್ಸೆಸ್‌ನ ಹಿರಿಯ ಕಾರ್ಯಕರ್ತ ಮನೋಹರ್ ಪಾರಿಕ್ಕರ್ ‘‘ಬೀಫ್ ಆಮದಿಗೆ ತಡೆಯೊಡ್ಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’’ ಎಂದು ಅಬ್ಬರಿಸಿದ್ದಾರೆ. ಗೋವು ರಕ್ಷಣಾ ಅಭಿಯಾನ ಕಾರ್ಯಕರ್ತರನ್ನು ಗುರಿಯಾಗಿಟ್ಟು ಮಾತನಾಡಿರುವ ಪಾರಿಕ್ಕರ್, ಆ ಆಮದು ಪ್ರಕ್ರಿಯೆಯ ಮಧ್ಯ ಪ್ರವೇಶಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಬೆಳಗಾವಿಯಿಂದ ಬೀಫ್ ಆಮದು ಮಾಡುವ ವ್ಯಾಪಾರಸ್ಥರ ಮೇಲೆ ಹಲ್ಲೆ ನಡೆಸುವುದಕ್ಕೆ ಅವಕಾಶ ನೀಡಲಾರೆವು ಎಂದು ಸ್ಪಷ್ಟಪಡಿಸಿದ್ದಾರೆ. ಬಳಿಕ ವ್ಯಾಪಾರಸ್ಥರು ತಮ್ಮ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ.

ಗೋವಾದ ಸಮಸ್ಯೆಯೇನೋ ಮುಖ್ಯಮಂತ್ರಿ ಪಾರಿಕ್ಕರ್ ಅವರ ಮಧ್ಯ ಪ್ರವೇಶದಿಂದ ಬಗೆ ಹರಿಯಿತು. ಆದರೆ ದೇಶದ ಲಕ್ಷಾಂತರ ರೈತರು, ವ್ಯಾಪಾರಸ್ಥರು ಮತ್ತು ಗೋಮಾಂಸಾಹಾರಿಗಳ ಬದುಕು ಸರಕಾರದ ದ್ವಂದ್ವ ನೀತಿಯಿಂದಾಗಿ ಅತಂತ್ರದಲ್ಲಿದೆ. ತಮ್ಮ ಗೋವುಗಳನ್ನು ಕಸಾಯಿಖಾನೆಗಾಗಿ ಮಾರಾಟ ಮಾಡಬಾರದು ಎಂಬ ಪ್ರಸ್ತಾವವನ್ನು ಸರಕಾರ ತೆರೆದಿಟ್ಟ ದಿನದಿಂದ ರೈತರು ತಮ್ಮ ಹಟ್ಟಿಯಲ್ಲಿದ್ದ ಗೋವುಗಳನ್ನು ಅತ್ತ ಮಾರಾಟ ಮಾಡಲೂ ಆಗದೆ, ಸಾಕಲೂ ಆಗದೆ ಅತಂತ್ರದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಮಧ್ಯ ಪ್ರದೇಶದಂತಹ ರಾಜ್ಯಗಳು, ಗೋವುಗಳನ್ನು ತ್ಯಜಿಸಿದರೆ ರೈತರ ಮೇಲೆ ಪ್ರಕರಣ ದಾಖಲಿಸುವ ಕಾನೂನು ಜಾರಿಗೊಳಿಸಲು ಸಿದ್ಧತೆ ನಡೆಸುತ್ತಿದೆ. ಅಂತಿಮವಾಗಿ ಗೋವು ಎನ್ನುವುದು ಬಡ ರೈತನ ಹೆಗಲ ಮೇಲಿಟ್ಟ ಶಿಲುಬೆಯಂತಾಗಿದೆ. ಅದನ್ನು ಎಲ್ಲಿಯವರೆಗೆ ಆತ ಹೊತ್ತುಕೊಂಡು ಹೋಗಬೇಕು? ಹೈನುಗಾರಿಕೆಯ ಮೂಲಕ ಬದುಕು ಸವೆಸುತ್ತಿದ್ದ ರೈತರಾರೂ ಮುಂದಿನ ದಿನಗಳಲ್ಲಿ ದನಗಳನ್ನು ಸಾಕುವ ಸಾಹಸಕ್ಕೆ ಇಳಿಯಲಾರರು. ಈ ಹಿಂದೆಲ್ಲ ಹಟ್ಟಿಯಲ್ಲಿರುವ ಹೆಚ್ಚುವರಿ ದನಗಳನ್ನು ಮಾರಿ ರೈತರು ತಮ್ಮ ಮನೆಖರ್ಚುಗಳನ್ನು ನಿಭಾಯಿಸುತ್ತಿದ್ದರು.

ಗೋವುಗಳ ಮಾರಾಟ ನಿಯಂತ್ರಣ ಕಾಯ್ದೆ ಅವರ ಪಾಲಿಗೆ ಇನ್ನೊಂದು ನೋಟು ನಿಷೇಧವಾಗಿ ಪರಿಣಮಿಸಿದೆ. ಹಟ್ಟಿಯಲ್ಲಿದ್ದ ದನವನ್ನು ಮಾರಿ ತಮ್ಮ ಬದುಕು ನಿರ್ವಹಿಸುವುದಕ್ಕೆ ಸರಕಾರ ತಡೆಯೊಡ್ಡಿತು. ಇತ್ತ ಅದನ್ನು ಹಟ್ಟಿಯಲ್ಲಿಟ್ಟು ಸಾಕುವಷ್ಟು ಶ್ರೀಮಂತರೂ ಅವರಲ್ಲ. ಬೀದಿಯಲ್ಲಿ ತ್ಯಜಿಸಬೇಕು ಅಥವಾ ಸಂಘಪರಿವಾರದ ಕಾರ್ಯಕರ್ತರಿಗೆ ಪುಕ್ಕಟೆಯಾಗಿ ಅದನ್ನು ನೀಡಬೇಕು. ರೈತರ ಹಟ್ಟಿಯಲ್ಲಿರುವ ಹಸುಗಳನ್ನು ಹೀಗೆ ಅಕ್ರಮವಾಗಿ ವಶಕ್ಕೆ ತೆಗೆದುಕೊಂಡು, ಅದನ್ನು ನಾಜೂಕಾಗಿ ಬೃಹತ್ ಕಸಾಯಿಖಾನೆಗಳಿಗೆ ವಿತರಿಸುವ ದಂಧೆಯೊಂದು ಆರಂಭವಾಯಿತು. ಇದೇ ಸಂದರ್ಭದಲ್ಲಿ ಸರಕಾರ ಇನ್ನೊಂದು ರೀತಿಯಲ್ಲಿ ರೈತರಿಗೆ ವಂಚಿಸಿತು. ಬೃಹತ್ ಫಾರ್ಮ್ ಗಳು ಕಸಾಯಿಖಾನೆಗಳಿಗೆ ಗೋವುಗಳನ್ನು ವಿತರಿಸಬಹುದು. ಆದರೆ ರೈತರು ಮಾತ್ರ ತಮ್ಮ ಹಟ್ಟಿಯಲ್ಲಿರುವ ಗೋವುಗಳನ್ನು ಮಾರಬಾರದು. ಇಷ್ಟೇ ಅಲ್ಲ, ಭಾರತದಲ್ಲಿ ಗೋಮಾಂಸಕ್ಕೆ ನಿಷೇಧ ಹೇರಲು ಬಯಸುವ ಸರಕಾರ, ವಿದೇಶಕ್ಕೆ ಟನ್ನು ಗಟ್ಟಳೆ ಗೋಮಾಂಸಗಳನ್ನು ರಫ್ತು ಮಾಡುತ್ತಿದೆ. ಹಾಗಾದರೆ ಸರಕಾರದ ನಿಜವಾದ ಸಮಸ್ಯೆ ಏನು? ‘‘ಗೋಹತ್ಯೆ ಮಾಡಬಹುದು. ಅದನ್ನು ವಿದೇಶಕ್ಕೆ ರಫ್ತು ಮಾಡಬಹುದು.

ಆದರೆ ದೇಶದ ಪ್ರಜೆಗಳು ಮಾತ್ರ ಗೋಮಾಂಸವನ್ನು ತಿನ್ನಬಾರದು’ ಎಂದಲ್ಲವೇ?. ಅಗ್ಗದ ಗೋಮಾಂಸದಿಂದ ಪೌಷ್ಟಿಕ ಆಹಾರವನ್ನು ತನ್ನದಾಗಿಸಿಕೊಳ್ಳುತ್ತಿದ್ದ ಬಡವರ ತಟ್ಟೆಯಿಂದ ಅವರ ಆಹಾರ, ಆರೋಗ್ಯವನ್ನು ಸರಕಾರ ಹೀಗೆ ಕಸಿದುಕೊಂಡಿತು. ಗೋವಾ ರಾಜ್ಯದ ಬೆಳವಣಿಗೆಗಳನ್ನೇ ತೆಗೆದುಕೊಳ್ಳೋಣ. ಬೆಳಗಾವಿಯಿಂದ ಗೋವಾಕ್ಕೆ ಗೋಮಾಂಸ ಸಾಗಿಸಲು ಆರೆಸ್ಸೆಸ್ ಹಿನ್ನೆಲೆಯಿರುವ ಪಾರಿಕ್ಕರ್ ಪೂರ್ಣ ಬೆಂಬಲವನ್ನು ಘೋಷಿಸುತ್ತಾರೆ. ಗೋವಾದ ಜನರಿಗೆ ಗೋಮಾಂಸ ಅತ್ಯಗತ್ಯ ಎಂದಾದರೆ, ಉಳಿದ ರಾಜ್ಯಗಳ ಜನರಿಗೆ ಯಾಕೆ ಅದು ಅನ್ವಯಿಸುವುದಿಲ್ಲ? ಬೆಳಗಾವಿಯ ಗೋವುಗಳಲ್ಲಿ ‘ದೇವರಿಲ್ಲ’ ಎಂದು ಪಾರಿಕ್ಕರ್ ನಂಬಿದ್ದಾರೆಯೇ? ಗೋವಾಕ್ಕೆ ಗೋಮಾಂಸ ಸಾಗಿಸಲು ಸಕಲ ಭದ್ರತೆ ನೀಡುವ ಕಾನೂನು ವ್ಯವಸ್ಥೆ, ಉಳಿದ ಕಡೆಗಳಲ್ಲಿ ಯಾಕೆ ನಿರ್ಲಕ್ಷ ವಹಿಸುತ್ತಿದೆ? ಒಂದು ವೇಳೆ ಗೋಮಾಂಸ ಸೇವನೆ ಅಪರಾಧವೆಂದಾದರೆ ಅದು ದೇಶದೆಲ್ಲೆಡೆಗೂ ಅನ್ವಯವಾಗಬೇಕು.

ಗೋವಾ, ಕೇರಳ, ಈಶಾನ್ಯ ಭಾರತದಲ್ಲಿ ಗೋಮಾಂಸ ಸೇವನೆಗೆ ಯಾವುದೇ ಅಡ್ಡಿಯಿಲ್ಲ ಎಂದು ಹೇಳುವ ಬಿಜೆಪಿಯ ನಾಯಕರು, ಉಳಿದ ರಾಜ್ಯಗಳಲ್ಲಿ ಗೋಮಾಂಸಕ್ಕೆ ಅಡ್ಡಿ ಪಡಿಸುವುದೇಕೆ? ಆಹಾರದ ಹಕ್ಕನ್ನು ಈ ದೇಶದ ಸಂವಿಧಾನ ಜನರಿಗೆ ನೀಡಿದೆ. ಯಾವ ಯಾವ ರಾಜ್ಯದ ಜನರು ಯಾವ ಯಾವ ಆಹಾರವನ್ನು ಸೇವಿಸಬೇಕು ಎನ್ನುವುದು ಸಂವಿಧಾನದ ಮಾರ್ಗ ಸೂಚಿಯ ಪ್ರಕಾರ ನಿರ್ಧಾರವಾಗಬೇಕೇ ಹೊರತು, ಆರೆಸ್ಸೆಸ್ ಮಾರ್ಗದರ್ಶನದಲ್ಲಿ ನಿರ್ಧಾರವಾಗಬಾರದು. ಇಂದು ಸರಕಾರದ ಇಂತಹ ಗೊಂದಲಕಾರಿ ನಿರ್ಧಾರ ಈ ದೇಶದ ಗ್ರಾಮೀಣ ಹೈನೋದ್ಯಮವನ್ನು ನಾಶ ಮಾಡಿದೆ. ಹಾಗೆಯೇ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪೌಷ್ಟಿಕ ಆಹಾರದ ತೀವ್ರ ಕೊರತೆಯನ್ನು ಸೃಷ್ಟಿಸಿದೆ. ಅರ್ಥವ್ಯವಸ್ಥೆ ಛಿದ್ರವಾಗಿ ಕೂತಿದೆ. ಗೋವು ಅಥವಾ ಹೈನೋದ್ಯಮ ಧರ್ಮಶಾಸ್ತ್ರದ ಭಾಗವಲ್ಲ, ಅರ್ಥಶಾಸ್ತ್ರದ ಭಾಗ ಎನ್ನುವುದನ್ನು ಬಿಜೆಪಿ ಇನ್ನಾದರೂ ಒಪ್ಪಿಕೊಳ್ಳಬೇಕು. ಗೋಮಾಂಸಾಹಾರಿಗಳೂ ಹೈನೋದ್ಯಮದ ಒಂದು ಭಾಗವೇ ಆಗಿದ್ದಾರೆ. ಅವರು ಆ ಸರಪಣಿಯಿಂದ ಕಳಚಿದರೆ ದೇಶದ ಗ್ರಾಮೀಣ ಹೈನೋದ್ಯಮವೂ ಕುಸಿಯುತ್ತದೆ. ಈಗಾಗಲೇ ಅದು ಕುಸಿದಿದೆ. ಸಂಪೂರ್ಣ ಕುಸಿದು ಬಡ ರೈತರ ಬದುಕು ಮೂರಾಬಟ್ಟೆಯಾಗುವ ಮೊದಲು ಸರಕಾರ ಎಚ್ಚೆತ್ತುಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News